ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20: ಬೆಂಗಳೂರಿನಲ್ಲಿ ಇಂದು ಕ್ವಾರ್ಟರ್​ಫೈನಲ್​ ಕಾದಾಟ

web smat
Published on

ಬೆಂಗಳೂರು: ಅಂತಿಮ ಘಟ್ಟ ತಲುಪಿರುವ ದೇಶೀಯ ಟಿ20 ಕ್ರಿಕೆಟ್​ ಟೂರ್ನಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯ ನಾಲ್ಕು ಕ್ವಾರ್ಟರ್​ಫೈನಲ್​ ಪಂದ್ಯಗಳು ಬುಧವಾರ ಒಂದೇ ದಿನ ನಡೆಯಲಿವೆ. ಮಧ್ಯಪ್ರದೇಶ ಮತ್ತು ಸೌರಾಷ್ಟ್ರ ನಡುವಿನ ದಿನದ ಮೊದಲ ಕ್ವಾರ್ಟರ್​ಫೈನಲ್​ ಪಂದ್ಯ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆಯಲಿದೆ. ಬರೋಡ-ಬಂಗಾಳ ನಡುವಿನ 2ನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮುಂಬೈ-ವಿದರ್ಭ ನಡುವಿನ 3ನೇ ಪಂದ್ಯ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ ನಡೆದರೆ, ಅಂತಿಮ ಕ್ವಾರ್ಟರ್​ಫೈನಲ್​ ಪಂದ್ಯ ದೆಹಲಿ-ಉತ್ತರ ಪ್ರದೇಶ ನಡುವೆ ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ.

ಮಧ್ಯಪ್ರದೇಶ, ಬರೋಡ, ದೆಹಲಿ, ವಿದರ್ಭ ಮತ್ತು ಮುಂಬೈ ತಂಡಗಳು ಲೀಗ್​ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ನೇರವಾಗಿ ಎಂಟರ ಟ್ಟಕ್ಕೇರಿದ್ದವು. ಸೌರಾಷ್ಟ್ರ 2ನೇ ಸ್ಥಾನ ಪಡೆದರೂ ಅತ್ಯುತ್ತಮ 2ನೇ ಸ್ಥಾನಿಯಾಗಿ ನೇರಅರ್ಹತೆ ಗಳಿಸಿತ್ತು. ಇನ್ನು ಬಂಗಾಳ ಮತ್ತು ಉತ್ತರ ಪ್ರದೇಶ ತಂಡಗಳು ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಆಡಿ ಅರ್ಹತೆ ಗಳಿಸಿವೆ.

ಸ್ಟಾರ್​ ಕ್ರಿಕೆಟಿಗರು ಕಣಕ್ಕೆ: ಹಲವು ಸ್ಟಾರ್​ ಕ್ರಿಕೆಟಿಗರು ಉದ್ಯಾನನಗರಿಯ ಕ್ವಾರ್ಟರ್​ಫೈನಲ್​ ಹಣಾಹಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಬರೋಡ ತಂಡದಲ್ಲಿ ಹಾರ್ದಿಕ್​ ಪಾಂಡ್ಯ, ಕೃನಾಲ್​ ಪಾಂಡ್ಯ ಸಹೋದರರು, ಬಂಗಾಳ ತಂಡದಲ್ಲಿ ಅನುಭವಿ ವೇಗಿ ಮೊಹಮದ್​ ಶಮಿ, ಮುಂಬೈನಲ್ಲಿ ಅಜಿಂಕ್ಯ ರಹಾನೆ, ಶ್ರೇಯಸ್​ ಅಯ್ಯರ್​, ಸೂರ್ಯಕುಮಾರ್​, ಪೃಥ್ವಿ ಷಾ, ಶಾರ್ದೂಲ್​ ಠಾಕೂರ್​, ಮಧ್ಯಪ್ರದೇಶ ತಂಡದಲ್ಲಿ ವೆಂಕಟೇಶ್​ ಅಯ್ಯರ್​, ರಜತ್​ ಪಾಟೀದಾರ್​, ಸೌರಾಷ್ಟ್ರದಲ್ಲಿ ಜೈದೇವ್​ ಉನಾದ್ಕತ್​, ವಿದರ್ಭದಲ್ಲಿ ಜಿತೇಶ್​ ಶರ್ಮ, ಕರುಣ್​ ನಾಯರ್​, ಉಮೇಶ್​ ಯಾದವ್​, ದೆಹಲಿಯಲ್ಲಿ ಇಶಾಂತ್​ ಶರ್ಮ, ಉತ್ತರ ಪ್ರದೇಶದಲ್ಲಿ ಭುವನೇಶ್ವರ್​ ಕುಮಾರ್​, ಯಶ್​ ದಯಾಳ್​ ಆಕರ್ಷಣೆ ಎನಿಸಿದ್ದಾರೆ.

*ಇಂದಿನ ಕ್ವಾರ್ಟರ್​ಫೈನಲ್ಸ್​

ಮಧ್ಯಪ್ರದೇಶ-ಸೌರಾಷ್ಟ್ರ

ಆರಂಭ: ಬೆಳಗ್ಗೆ 9.00

ಬರೋಡ-ಬಂಗಾಳ

ಆರಂಭ: ಬೆಳಗ್ಗೆ 11.00

ಮುಂಬೈ-ವಿದರ್ಭ

ಆರಂಭ: ಮಧ್ಯಾಹ್ನ 1.30

ದೆಹಲಿ-ಉತ್ತರ ಪ್ರದೇಶ

ಆರಂಭ: ಸಂಜೆ 4.30

ನೇರಪ್ರಸಾರ: ಜಿಯೋಸಿನಿಮಾ.

ಉಚಿತ ಪ್ರವೇಶ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾರ್ಟರ್​ಫೈನಲ್​ ಪಂದ್ಯಗಳನ್ನು ವೀಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ. ಗೇಟ್​ ನಂ. 14ರಿಂದ ಪ್ರೇಕ್ಷಕರು ಪ್ರವೇಶಿಸಬಹುದು ಎಂದು ಕೆಎಸ್​ಸಿಎ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net