

ಮೈಸೂರು: ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ತನ್ನ 3ನೇ ಪಂದ್ಯದಲ್ಲಿ ಪ್ರವಾಸಿ ಗೋವಾ ಎದುರು ಪೂರ್ಣ ಅಂಕ ಸಂಪಾದಿಸಲು ಸುಯಶ್ ಪ್ರಭುದೇಸಾಯಿ (143 ರನ್*, 289 ಎಸೆತ, 11 ಬೌಂಡರಿ) ಅಡ್ಡಿಯಾದರು. 2ನೇ ಇನಿಂಗ್ಸ್ನಲ್ಲಿ 436 ನಿಮಿಷ ಕ್ರೀಸ್ನಲ್ಲಿ ನಿಂತು ಆತಿಥೇಯ ಬೌಲರ್ಗಳಿಗೆ ಕಗ್ಗಂಟಾದ ಸುಯಶ್, ಸಮಯೋಚಿತ ಶತಕ ದಾಖಲಿಸುವ ಕರ್ನಾಟಕ ತಂಡ ಕೇವಲ 3 ಅಂಕಗಳಿಗೆ ತೃಪ್ತಿಪಡುವಂತೆ ಮಾಡಿದರು.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್(ಗ್ಲೇಡ್ಸ್) ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಅಂತಿಮ ದಿನವಾದ ಸೋಮವಾರ ಬೆಳಗ್ಗೆ 1 ವಿಕೆಟ್ಗೆ 93 ರನ್ಗಳಿಂದ ದ್ವೀತಿಯ ಇನಿಂಗ್ಸ್ ಮುಂದುವರಿಸಿದ ಗೋವಾ, 100 ಓವರ್ಗಳಲ್ಲಿ 6 ವಿಕೆಟ್ಗೆ 282 ರನ್ ದಾಖಲಿಸಿ ಡ್ರಾ ಸಾಧಿಸಿತು. ಮೊದಲ ಇನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕ ಗಳಿಸಿದ ಕರ್ನಾಟಕ, ಸಿ ಗುಂಪಿನ ಅಂಕಪಟ್ಟಿಯಲ್ಲಿ ಒಟ್ಟು 9 ಅಂಕ ಕಲೆಹಾಕಿ 3ನೇ ಸ್ಥಾನದಲ್ಲಿದೆ. ಸೋಲಿನಿಂದ ಪಾರಾದ ಗೋವಾ 1 ಅಂಕ ಗಳಿಸಿ ಒಟ್ಟು 4 ಅಂಕಗಳೊಂದಿಗೆ 6 ಸ್ಥಾನದಲ್ಲಿದೆ.
ಕಾಡಿದ ದೀಪರಾಜ್-ಸುಯಶ್ ಜೋಡಿ
ಮೊದಲ ಇನಿಂಗ್ಸ್ನಲ್ಲಿ ಪೆವಿಲಿಯನ್ ಪರೇಡ್ ನಡೆಸಿದ್ದ ಗೋವಾ ಬ್ಯಾಟರ್ಗಳು 2ನೇ ಸರದಿಯಲ್ಲಿ ಕರ್ನಾಟಕದ ಬೌಲರ್ಗಳನ್ನು ಕಾಡಿದರು. 3ನೇ ದಿನ 2ನೇ ವಿಕೆಟ್ಗೆ 92 ರನ್ ಸೇರಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕರ್ನಾಟಕ ಮೂಲದ ಬ್ಯಾಟರ್ ಕೆ.ವಿ.ಸಿದ್ದಾರ್ಥ್(57) ಹಾಗೂ ಸುಯಶ್ ಪ್ರಭುದೇಸಾಯಿ ಜೋಡಿ ಕೇವಲ ಒಂದು ರನ್ಗಳಿಸಿ ಬೇರ್ಪಟ್ಟಿತು. ವೈಶಾಕ್ ಬೌಲಿಂಗ್ನಲ್ಲಿ ದೇವದತ್ ಪಡಿಕಲ್ಗೆ ಸಿದ್ದಾರ್ಥ್ ಕ್ಯಾಚ್ ನೀಡಿದರು. ಬಳಿಕ ಆಗಮಿಸಿದ ಸ್ನೇಹಲ್ ಕೌತಾಂಕರ್(8) ಎಂ.ವೆಂಕಟೇಶ್ ಬೌಲಿಂಗ್ನಲ್ಲಿ ಎಲ್ಬಿಗೆ ಬಲಿಯಾದರು. ನಂತರ ಪ್ರಭುದೇಸಾಯಿ ಜತೆಗೂಡಿದ ದೀಪರಾಜ್ ಗಾಂವ್ಕರ್(36) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಗೋವಾ ತಂಡ ಡ್ರಾ ಸಾಧಿಸಲು ನೆರವಾದರು. ಈ ಜೋಡಿ 175 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದು 4ನೇ ವಿಕೆಟ್ಗೆ 246 ಎಸೆತದಲ್ಲಿ 97 ರನ್ ಪೇರಿಸಿತು. ಸುಯಶ್ ಪ್ರಭುದೇಸಾಯಿ ತಾಳ್ಮೆಯ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಮಿಂಚಿದರು.
ಗೋವಾ: 321 ಮತ್ತು 100 ಓವರ್ಗಳಲ್ಲಿ 6 ವಿಕೆಟ್ಗೆ 282 (ಪ್ರಭುದೇಸಾಯಿ 143*, ಕೆ.ವಿ.ಸಿದ್ದಾರ್ಥ್ 57, ಸ್ನೇಹಲ್ 8, ದೀಪರಾಜ್ 36, ದರ್ಶನ್ ಮಿಸಾಲ್ 13, ಅರ್ಜುನ್ 6, ವೈಶಾಕ್ 35ಕ್ಕೆ 2, ರೋಹಿತ್ 67ಕ್ಕೆ 2, ಶುಭಾಂಗ್ 77ಕ್ಕೆ 1, ವೆಂಕಟೇಶ್ 29ಕ್ಕೆ 1). ಕರ್ನಾಟಕ: 9 ವಿಕೆಟ್ಗೆ 498 ಡಿಕ್ಲೇರ್.
ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ಜ.26&29
ಎದುರಾಳಿ: ತ್ರಿಪುರ
ಸ್ಥಳ: ಅಗರ್ತಲ