

ಉಡುಪಿ: ಬಾರ್ಬಡೋಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ, 2024ರ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಲ್ಲದೇ 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟಿದ್ದು ಮರೆಯಲಾದ ಕ್ಷಣ. ವಿಶ್ವಕಪ್ ಗೆದ್ದ ಹೀರೋಗಳಿಗೆ ಮುಂಬೈನಲ್ಲಿ ವಿಶೇಷವಾಗಿ ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಕೂಡ ಮಾಡಲಾಯಿತು. ಫೈನಲ್ನಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ಹಿಡಿಯುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿ, ಭಾರತದ ಗೆಲುವಿಗೆ ಕಾರಣರಾದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಇಂದು ತಮ್ಮ ಪತ್ನಿ ಜತೆಗೆ ಉಡುಪಿಗೆ ಆಗಮಿಸಿದರು.
ಪತ್ನಿ ದೇವಿಶಾ ಶೆಟ್ಟಿ ಜತೆ ಉಡುಪಿಯಲ್ಲಿರುವ ಕಾಪುವಿನ ಮಾರಿಗುಡಿ ದೇವಾಲಯಕ್ಕೆ ಭೇಟಿ ಕೊಟ್ಟ ಸೂರ್ಯಕುಮಾರ್ ಯಾದವ್, ವಿಶ್ವಕಪ್ ಗೆದ್ದ ಬೆನ್ನಲ್ಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಂದುಕೊಂಡಂತೆ ಹರಕೆ ತೀರಿಸಿದ್ದಾರೆ. ಸೂರ್ಯ ಅವರ ಧರ್ಮಪತ್ನಿ ಮೂಲತಃ ಮಂಗಳೂರಿನವರಾಗಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಮೊದಲು ಸ್ನೇಹಿತರಾಗಿ ನಂತರ ಪ್ರೀತಿಗೆ ಜಾರಿದವರು. ಇದೀಗ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಸ್ಥಳೀಯರನ್ನು ಮಾತನಾಡಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಅನ್ನು ಟೀಮ್ ಇಂಡಿಯಾ ಗೆದ್ದು ಬರಬೇಕು ಎಂದು ಟೂರ್ನಿಗೂ ಮುನ್ನ ಹರಕೆ ಹೊತ್ತಿದ್ದ ಸೂರ್ಯಕುಮಾರ್ ದಂಪತಿ, ಇಂದು ಅದರಂತೆಯೇ ಹರಕೆ ತೀರಿಸಿದ್ದಾರೆ. ವಿಶ್ವಕಪ್ ಗೆದ್ದ ಸೂರ್ಯಕುಮಾರ್ರನ್ನು ನೋಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.