ಸುಶಾಂತ್‌ಗೆ ನ್ಯಾಯ ಸಿಗಲಿದೆ, ಸುರೇಶ್ ರೈನಾ ಭಾವಪೂರ್ಣ ಸಂದೇಶ

suresh raina sushant singh rajput
Published on

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ, ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ. ಸುಶಾಂತ್ ನಿಗೂಢ ಸಾವಿನ ಪ್ರಕರಣದ ತನಿಖೆಯಲ್ಲಿ ಅವರಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ರೈನಾ, ದುಬೈನಲ್ಲಿ ಕ್ವಾರಂಟೈನ್‌ನಲ್ಲಿ ಇರುವ ನಡುವೆ ವಿಡಿಯೋ ಒಂದರ ಮೂಲಕ ಭಾವಪೂರ್ಣ ಸಂದೇಶ ಹಂಚಿಕೊಂಡಿದ್ದಾರೆ.

‘ಸಹೋದರ ನೀನು ಯಾವಾಗಲೂ ನಮ್ಮ ಹೃದಯದಲ್ಲಿ ಜೀವಂತವಾಗಿರುವೆ. ನಿನ್ನ ಅಭಿಮಾನಿಗಳು ನಿನ್ನನ್ನು ಎಲ್ಲಕ್ಕಿಂತ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನನಗೆ ಸರ್ಕಾರ ಮತ್ತು ಅದರ ನಾಯಕರ ಮೇಲೆ ಪೂರ್ಣ ವಿಶ್ವಾಸವಿದ್ದು, ನಿನಗೆ ನ್ಯಾಯ ಒದಗಿಸುವಲ್ಲಿ ಅವರು ಹಿಂದುಳಿಯುವುದಿಲ್ಲ. ನಿನೊಬ್ಬ ನಿಜವಾದ ಸ್ಫೂರ್ತಿ’ ಎಂದು ಬರೆದುಕೊಂಡಿರುವ ರೈನಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದಾರೆ.

ಜತೆಗೆ ಜಸ್ಟಿಸ್ ಫಾರ್ ಎಸ್‌ಎಸ್‌ಆರ್ ಹ್ಯಾಷ್‌ಟ್ಯಾಗ್ ಬಳಸಿರುವ ರೈನಾ, ಐಪಾಡ್‌ನಲ್ಲಿರುವ ಸುಶಾಂತ್ ಅವರ ಚಿತ್ರದ ಎದುರು ವಿಡಿಯೋವನ್ನೂ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಸುಶಾಂತ್ ಅಭಿನಯದ ಕೇದಾರ್‌ನಾಥ್ ಸಿನಿಮಾದ ‘ನರಾಜ್‌ಗಿ ತೇರಿ’ ಹಾಡು ಕೂಡ ಕೇಳಿಸಿದೆ.

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜೀವನಾಧರಿತ ಬಾಲಿವುಡ್ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಜೀವ ತುಂಬಿರುವ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಸದ್ಯ ಸಿಬಿಐ ತನಿಖೆ ನಡೆಯುತ್ತಿದೆ. ಸುಶಾಂತ್ ಸಾವು ತಮ್ಮನ್ನು ಇನ್ನೂ ಕಾಡುತ್ತಿದೆ ಎಂದು ರೈನಾ ಕಳೆದ ವಾರವೂ ಅವರ ಜತೆಗಿನ ಚಿತ್ರದೊಂದಿಗೆ ಟ್ವೀಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net