

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಸುರೇಶ್ ರೈನಾಗೆ ಶುಕ್ರವಾರ 34ನೇ ಜನ್ಮದಿನದ ಸಂಭ್ರಮ. ಇದನ್ನು ಅವರು ಕುಟುಂಬದ ಸದಸ್ಯರೊಂದಿಗೆ ಮಾಲ್ಡೀವ್ಸ್‌ನಲ್ಲಿ ಆಚರಿಸಿದ್ದಾರೆ.
‘ಜನ್ಮದಿನದ ಬೆಳಗ್ಗೆ ರುಚಿ ಮತ್ತು ಆರೋಗ್ಯಕರವಾದ ಉಪಹಾರದೊಂದಿಗೆ ಆರಂಭಗೊಂಡಿತು. ಸುಂದರವಾದ ವಾತಾವರಣವೂ ಜತೆಗಿತ್ತು’ ಎಂದು ಸುರೇಶ್ ರೈನಾ ಅವರು ಇನ್‌ಸ್ಟಾಗ್ರಾಂನಲ್ಲಿ ಬರದುಕೊಂಡಿದ್ದಾರೆ. ಜತೆಗೆ, ಮಾಲ್ಡೀವ್ಸ್‌ನ ಕಡಲತೀರದ ರೆಸಾರ್ಟ್‌ನಲ್ಲಿ ಪತ್ನಿ ಪ್ರಿಯಾಂಕಾ ಚೌಧರಿ ಮತ್ತು ಪುತ್ರಿ ಗ್ರೇಸಿಯಾ ಜತೆಗಿರುವ ಚಿತ್ರವನ್ನೂ ಪ್ರಕಟಿಸಿದ್ದಾರೆ.
ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ ರೈನಾ, ವೈಯಕ್ತಿಕ ಕಾರಣ ನೀಡಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಪರವೂ ಆಡಿರಲಿಲ್ಲ. ಈ ನಡುವೆ ಸಾಮಾಜಿಕ ಕೆಲಸಗಳಲ್ಲಿ ರೈನಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 34ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರು ದೇಶದ 34 ಸರ್ಕಾರಿ ಶಾಲೆಗಳಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಂಕಲ್ಪವನ್ನೂ ಮಾಡಿದ್ದರು.
ಜನ್ಮದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಸುರೇಶ್ ರೈನಾ ಅವರಿಗೆ ವಿವಿಧ ಹಾಲಿ-ಮಾಜಿ ಆಟಗಾರರ ಸಹಿತ ಕ್ರಿಕೆಟ್ ವಲಯದಿಂದ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.