ಇಂದು ಹೈದರಾಬಾದ್​ನಲ್ಲಿ ಸನ್​ರೈಸರ್ಸ್​-ಮುಂಬೈ ಮರುಮುಖಾಮುಖಿ; ಸೇಡಿನ ತವಕದಲ್ಲಿ ಕಮ್ಮಿನ್ಸ್ ಪಡೆ

web srh vs mi
Published on

ಹೈದರಾಬಾದ್​: ಕೊನೇ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿರುವ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಹ್ಯಾಟ್ರಿಕ್​ ಗೆಲುವಿನೊಂದಿಗೆ ಲಯಕ್ಕೆ ಮರಳಿರುವ ಮುಂಬೈ ಇಂಡಿಯನ್ಸ್​ ತಂಡಗಳು ಐಪಿಎಲ್​ 18ನೇ ಆವೃತ್ತಿಯಲ್ಲಿ ಬುಧವಾರ ಮರುಮುಖಾಮುಖಿ ಆಗಲಿವೆ. ವಾರದ ಹಿಂದಷ್ಟೇ ವಾಂಖೆಡೆಯಲ್ಲಿ ನಡೆದ ಉಭಯ ತಂಡಗಳ ಮೊದಲ ಮುಖಾಮುಖಿಯಲ್ಲಿ ಮುಂಬೈ ಗೆದ್ದಿತ್ತು. ಅದಕ್ಕೀಗ ತನ್ನ ತವರಿನ ಆರ್​ಜಿಐ ಸ್ಟೇಡಿಯಂನಲ್ಲಿ ಸೇಡು ತೀರಿಸಿಕೊಳ್ಳುವುದು ಪ್ಯಾಟ್​ ಕಮ್ಮಿನ್ಸ್​ ಬಳಗದ ಹಂಬಲವಾಗಿದೆ.

ಟೂರ್ನಿಯ ಆರಂಭದಲ್ಲಿ 300 ರನ್​ ಗಳಿಸುವ ಗುರಿ ಇಟ್ಟುಕೊಂಡಿದ್ದ ಸನ್​ರೈಸರ್ಸ್​ ಮೊದಲ ಪಂದ್ಯದಲ್ಲೇ 286 ರನ್​ ಸಿಡಿಸಿ ಬೀಗಿತ್ತು. ಆದರೆ ನಂತರದಲ್ಲಿ 180&200ರ ಗಡಿ ದಾಟಿದರೆ ಸಾಕಪ್ಪ ಎಂಬಂಥ ಸ್ಥಿತಿ ಅದರದಾಗಿದೆ. ಪಂಜಾಬ್​ ಎದುರು 245 ರನ್​ ಚೇಸ್​ ಮಾಡಿ ಗೆದ್ದಿದ್ದ ಸನ್​ರೈಸರ್ಸ್​ ಕಳೆದ ಪಂದ್ಯದಲ್ಲಿ ಮುಂಬೈ ಎದುರು 162 ರನ್​ಗಳಿಗೆ ತೃಪ್ತಿಪಟ್ಟಿತ್ತು. ಸನ್​ರೈಸರ್ಸ್​ ತಂಡದ ಈ ಅಸ್ಥಿರ ನಿರ್ವಹಣೆಯೇ ಅದಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​ ವಾಂಖೆಡೆಯಲ್ಲಿ ಪವರ್​ಪ್ಲೇನಲ್ಲಿ ಬಿರುಸಿನ ಆಟವಾಡಲು ವಿಲರಾಗಿದ್ದರು. ಇಶಾನ್​ ಕಿಶನ್​, ನಿತೀಶ್​ ಕುಮಾರ್​ ರೆಡ್ಡಿ, ಹೆನ್ರಿಕ್​ ಕ್ಲಾಸೆನ್​ ರನ್​ಬರ ಎದುರಿಸುತ್ತಿದ್ದರೆ, ಯುವ ಬ್ಯಾಟರ್​ ಅನಿಕೇತ್​ ವರ್ಮರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ತಂಡ ವಿಲವಾಗುತ್ತಿದೆ.

ವಾಂಖೆಡೆಯಲ್ಲಿ ಸನ್​ರೈಸರ್ಸ್​ಗೆ 17ನೇ ಓವರ್​ ತನಕ ಒಂದೂ ಸಿಕ್ಸರ್​ ಬಿಟ್ಟುಕೊಡದೆ ಬಿಗಿ ಬೌಲಿಂಗ್​ ದಾಳಿ ಪ್ರದರ್ಶಿಸಿದ್ದ ಮುಂಬೈ, ಹೈದರಾಬಾದ್​ನಲ್ಲೂ ಅಂಥದ್ದೇ ಕಾರ್ಯತಂತ್ರ ಮುಂದುವರಿಸುವ ಯೋಜನೆಯಲ್ಲಿದೆ. ಆದರೆ ಇಲ್ಲಿನ ಫ್ಲ್ಯಾಟ್​ ಪಿಚ್​ನಲ್ಲಿ ಮುಂಬೈ ಬೌಲರ್​ಗಳಿಗೆ ಕಠಿಣ ಸವಾಲು ಎದುರಾಗಲಿದೆ. ಇನ್ನು ರೋಹಿತ್​ ಶರ್ಮ ಕಳೆದ ಪಂದ್ಯದಲ್ಲಿ ಸಿಎಸ್​ಕೆ ಎದುರು ಅಜೇಯ 76 ರನ್​ ಸಿಡಿಸಿ ಲಯಕ್ಕೆ ಮರಳಿರುವುದು ಮುಂಬೈ ಪಾಳಯದಲ್ಲಿ ಸಂತಸ ಹರಡಿದೆ. ಜಸ್​ಪ್ರೀತ್​ ಬುಮ್ರಾ ಕೂಡ ವಿಕೆಟ್​ ಕಬಳಿಸಿ ಮಿಂಚಿದ್ದರು. ಇದರೊಂದಿಗೆ ಮುಂಬೈ ತಂಡದ ಬಹುತೇಕ ತಲೆನೋವು ನಿವಾರಣೆಯಾಗಿದೆ. ಇನ್ನೀಗ ಗೆಲುವಿನ ಲಯ ಕಾಯ್ದುಕೊಳ್ಳಲು ಹಾರ್ದಿಕ್​ ಪಾಂಡ್ಯ ಪಡೆ ಗಮನಹರಿಸಬಹುದಾಗಿದೆ.

ಪ್ಲೇಆಫ್​ ಲೆಕ್ಕಾಚಾರ...

ಆಡಿರುವ ಮೊದಲ 7 ಪಂದ್ಯಗಳಲ್ಲಿ 5ರಲ್ಲಿ ಸೋತು, 2ರಲ್ಲಷ್ಟೇ ಗೆದ್ದಿರುವ ಸನ್​ರೈಸರ್ಸ್​ಗೆ ಪ್ಲೇಆಫ್​ ಹಂತಕ್ಕೇರಲು ಉಳಿದಿರುವ 7 ಪಂದ್ಯಗಳಲ್ಲಿ 6ರಲ್ಲಾದರೂ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ. ಕಳಪೆ ರನ್​ರೇಟ್​ (-1.217) ಕೂಡ ಹೊಂದಿರುವ ಸನ್​ರೈಸರ್ಸ್​ ಇನ್ನೊಂದು ಪಂದ್ಯ ಸೋತರೂ ಟೂರ್ನಿಯಿಂದ ಬಹುತೇಕ ಹೊರಬಿದ್ದಂತೆ. ಕೊನೇ 7 ಪಂದ್ಯಗಳಲ್ಲಿ ಎಂಐ, ಸಿಎಸ್​ಕೆ, ಜಿಟಿ, ಡಿಸಿ, ಕೆಕೆಆರ್​, ಆರ್​ಸಿಬಿ ಮತ್ತು ಎಲ್​ಎಸ್​ಜಿ ಸವಾಲು ಎದುರಿಸಲಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ತಲಾ 4 ಜಯ, ಸೋಲು ಕಂಡಿರುವ ಮುಂಬೈ 8 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇಆಫ್​ ಹಂತಕ್ಕೇರಲು ಉಳಿದ 6 ಪಂದ್ಯಗಳಲ್ಲಿ ಮುಂಬೈಗೆ ಕನಿಷ್ಠ 4 ಗೆಲುವಿನ ಅಗತ್ಯವಿದೆ. ಕೊನೇ 6 ಪಂದ್ಯಗಳಲ್ಲಿ ಎಸ್​ಆರ್​ಎಚ್​, ಎಲ್​ಎಸ್​ಜಿ, ಆರ್​ಆರ್​, ಜಿಟಿ, ಪಿಬಿಕೆಎಸ್​ ಮತ್ತು ಡಿಸಿ ಸವಾಲು ಎದುರಾಗಲಿದೆ. ಈ ಪೈಕಿ ಕೊನೇ 3 ಪಂದ್ಯಗಳು ಅಂಕಪಟ್ಟಿಯ ಅಗ್ರ 4ರೊಳಗಿನ ತಂಡದ ವಿರುದ್ಧ ಆಗಿರುವುದು ಕಠಿಣ ಸವಾಲು ಒಡ್ಡಲಿದೆ.

ಮುಖಾಮುಖಿ: 24

ಸನ್​ರೈಸರ್ಸ್​: 10

ಮುಂಬೈ: 14

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಕಮ್ಮಿನ್ಸ್​ ಮಿನಿ ವಿರಾಮ

ಸನ್​ರೈಸರ್ಸ್​ ತಂಡ ತನ್ನ ಕೊನೇ ಪಂದ್ಯವನ್ನು ಏ.17ರಂದು ಮುಂಬೈ ವಿರುದ್ಧವೇ ಆಡಿತ್ತು. ನಂತರ ಲಭಿಸಿದ 6 ದಿನಗಳ ವಿರಾಮದ ವೇಳೆ ಸನ್​ರೈಸರ್ಸ್​ ನಾಯಕ ಪ್ಯಾಟ್​ ಕಮ್ಮಿನ್ಸ್​ ಪತ್ನಿ, ಮಕ್ಕಳೊಂದಿಗೆ ಸಿಂಗಾಪುರಕ್ಕೆ ತೆರಳಿ ರಜಾ ದಿನಗಳನ್ನು ಆನಂದಿಸಿ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net