

ಕೇಪ್ಟೌನ್: ಐಪಿಎಲ್ನಲ್ಲಿ ಆಡುವ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಒಡೆತನದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ದಕ್ಷಿಣ ಆಫ್ರಿಕಾದ "ಎಸ್ಎ20' ಟಿ20 ಲೀಗ್ನಲ್ಲಿ ಸತತ 2ನೇ ಬಾರಿ ಪ್ರಶಸ್ತಿ ಜಯಿಸಿದೆ.
ಶನಿವಾರ ನಡೆದ ಫೈನಲ್ನಲ್ಲಿ ಏಡನ್ ಮಾರ್ಕ್ರಮ್ ಸಾರಥ್ಯದ ಈಸ್ಟರ್ನ್ ಕೇಪ್ ತಂಡ ಡರ್ಬನ್ ಸೂಪರ್ಜೈಂಟ್ಸ್ ಎದುರು 89 ರನ್ಗಳಿಂದ ಜಯಿಸಿತು. ಸನ್ರೈಸರ್ಸ್ ಒಡತಿ ಕಾವ್ಯಾ ಮಾರನ್ ತಂಡದೊಂದಿಗೆ ಸಂಭ್ರಮಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ 3 ವಿಕೆಟ್ಗೆ 204 ರನ್ ಪೇರಿಸಿದರೆ, ಪ್ರತಿಯಾಗಿ ಸೂಪರ್ಜೈಂಟ್ಸ್ ತಂಡ 17 ಓವರ್ಗಳಲ್ಲಿ 115 ರನ್ಗಳಿಗೆ ಸರ್ವಪತನ ಕಂಡಿತು. ಡರ್ಬನ್ ಸೂಪರ್ಜೈಂಟ್ಸ್ ತಂಡವು ಐಪಿಎಲ್ನಲ್ಲಿ ಆಡುವ ಲಖನೌ ಸೂಪರ್ಜೈಂಟ್ಸ್ ಮಾಲೀಕರ ಒಡೆತನಕ್ಕೆ ಒಳಪಟ್ಟಿದೆ.
ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡದ ಸೋಲಿನ ವೇಳೆ ಸ್ಟೇಡಿಯಂನಲ್ಲಿ ಸಪ್ಪೆ ಮೋರೆ ಹಾಕುತ್ತಿದ್ದ ಒಡತಿ ಕಾವ್ಯ ಮಾರನ್, ದಕ್ಷಿಣ ಆಫ್ರಿಕಾದಲ್ಲಿ ನಗುಮೊಗದೊಂದಿಗೆ ಸಂಭ್ರಮಿಸಿರುವುದಕ್ಕೆ ಕ್ರಿಕೆಟ್ ಪ್ರೇಮಿಗಳು ಖುಷಿಪಟ್ಟಿದ್ದಾರೆ.
ಈ ಗೆಲುವು ಸನ್ರೈಸರ್ಸ್ ಮಾಲೀಕರಿಗೆ ಐಪಿಎಲ್ಗೆ ಮುನ್ನ ಹೊಸ ತಲೆನೋವನ್ನೂ ತಂದಿಟ್ಟಿದೆ. ಕಳೆದ ಹರಾಜಿನಲ್ಲಿ 20 ಕೋಟಿ ರೂ. ಮೌಲ್ಯಕ್ಕೆ ಖರೀದಿಸಿರುವ ಆಸ್ಟ್ರೇಲಿಯಾದ ಯಶಸ್ವಿ ನಾಯಕ ಪ್ಯಾಟ್ ಕಮ್ಮಿನ್ಸ್ರನ್ನು ಮುಂದಿನ ಐಪಿಎಲ್ಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ನೇಮಿಸಬೇಕೇ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಸತತ 2 ಪ್ರಶಸ್ತಿ ಗೆದ್ದುಕೊಟ್ಟಿರುವ ಏಡನ್ ಮಾರ್ಕ್ರಮ್ರನ್ನು ಐಪಿಎಲ್ನಲ್ಲೂ ನಾಯಕರಾಗಿ ಮುಂದುವರಿಸಬೇಕೇ ಎಂಬ ಗೊಂದಲ ಎದುರಾಗಿದೆ.