ಭಾರತ ಟೆಸ್ಟ್​ ತಂಡದಿಂದ ಶ್ರೇಯಸ್​ಗೆ ಗೇಟ್​ಪಾಸ್​; ರಾಹುಲ್​-ಜಡೇಜಾ ತಂಡಕ್ಕೆ ಮರಳಿದರೂ ಆಡುವ ಗ್ಯಾರಂಟಿ ಇಲ್ಲ!

ind test team web
Published on

ನವದೆಹಲಿ: ಕಳೆದ ಕೆಲ ದಿನಗಳಿಂದ ತಂಡ ಪ್ರಕಟವನ್ನು ಮುಂದೂಡುತ್ತಲೇ ಬಂದಿದ್ದ ಬಿಸಿಸಿಐ, ಶನಿವಾರ ಕೊನೆಗೂ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಅಂತಿಮ 3 ಟೆಸ್ಟ್​ ಪಂದ್ಯಗಳಿಗೆ 17 ಆಟಗಾರರ ಭಾರತ ತಂಡವನ್ನು ಘೋಷಿಸಿದೆ. ಕನ್ನಡಿಗ ಕೆಎಲ್​ ರಾಹುಲ್​ ಮತ್ತು ಆಲ್ರೌಂಡರ್​ ರವೀಂದ್ರ ಜಡೇಜಾ ತಂಡಕ್ಕೆ ಮರಳಿದ್ದರೂ, ಬಿಸಿಸಿಐ ವೈದ್ಯಕಿಯ ತಂಡದಿಂದ ಫಿಟ್ನೆಸ್​ ಬಗ್ಗೆ ಹಸಿರು ನಿಶಾನೆ ದೊರೆತರಷ್ಟೇ 3ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಬಂಗಾಳದ ವೇಗಿ ಆಕಾಶ್​ ದೀಪ್​ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಪಡೆದಿದ್ದಾರೆ.

ಮೊದಲ ಟೆಸ್ಟ್​ ಪಂದ್ಯದ ವೇಳೆ ಗಾಯಗೊಂಡ ಕಾರಣ 2ನೇ ಟೆಸ್ಟ್​ನಿಂದ ಹೊರಗುಳಿದಿದ್ದ ರಾಹುಲ್​ ಮತ್ತು ಜಡೇಜಾ, ಕೊನೇ 3 ಟೆಸ್ಟ್​ಗಳಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಫಿಟ್ನೆಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾದರಷ್ಟೇ ಮರಳಿ ಕಣಕ್ಕಿಳಿಯಲಿದ್ದಾರೆ. ಜಡೇಜಾ ಸ್ನಾಯುಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದರೆ, ರಾಹುಲ್​ ಬಲತೊಡೆ ಸ್ನಾಯುವಿನಲ್ಲಿ ನೋವು ಹೊಂದಿದ್ದಾರೆ. ಮೊದಲ ಟೆಸ್ಟ್​ನಲ್ಲಿ ಜಡೇಜಾ 87 ಮತ್ತು ರಾಹುಲ್​ 86 ರನ್​ ಗಳಿಸಿ ಮಿಂಚಿದ್ದರು. 2ನೇ ಟೆಸ್ಟ್​ನಲ್ಲಿ ಇವರಿಬ್ಬರೂ ಇಲ್ಲದೆ ಭಾರತ ಗೆದ್ದಿದ್ದರೂ, ರಾಜ್​ಕೋಟ್​ನಲ್ಲಿ ಇವರಿಬ್ಬರ ಹಾಜರಿ ಭಾರತಕ್ಕೆ ಬಾಜ್​ಬಾಲ್​ ಕಾರ್ಯತಂತ್ರವನ್ನು ಎದುರಿಸಲು ಇನ್ನಷ್ಟು ಬಲ ತುಂಬಲಿದೆ. "ಕೆಎಲ್​ ರಾಹುಲ್​ ಈಗಾಗಲೆ ಬಹುತೇಕ ಫಿಟ್​ ಆಗಿದ್ದು, 11ರ ಬಳಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಜಡೇಜಾ ಕೂಡ ಉತ್ತಮ ರೀತಿಯಲ್ಲಿ ಚೇತರಿಕೆ ಕಂಡಿದ್ದಾರೆ. 3ನೇ ಟೆಸ್ಟ್​ಗೆ ಇನ್ನೂ 5 ದಿನಗಳಿದ್ದು, ಅದಕ್ಕೆ ಮುನ್ನ ಅವರೂ ಫಿಟ್​ ಆಗುವ ನಿರೀೆ ಇದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಶ್ರೇಯಸ್​ ಅಯ್ಯರ್​ಗೆ ಕೊಕ್​

ಶ್ರೇಯಸ್​ ಅಯ್ಯರ್​ ತೊಡೆಸಂದು ಮತ್ತು ಬೆನ್ನುನೋವಿನಿಂದ ಬಳಲುತ್ತಿದ್ದರೂ, ಅದರು ಪಂದ್ಯ ತಪ್ಪಿಸಿಕೊಳ್ಳುವಷ್ಟು ಗಂಭೀರವಲ್ಲ. ಆದರೆ ಕಳೆದ ದಣ ಆಫ್ರಿಕಾ ಪ್ರವಾಸದಿಂದ ಅವರು ರನ್​ಬರ ಎದುರಿಸುತ್ತಿರುವುದರಿಂದ ಇಂಗ್ಲೆಂಡ್​ ವಿರುದ್ಧದ ಕೊನೇ 3 ಟೆಸ್ಟ್​ಗಳಿಗೆ ಆಯ್ಕೆಗಾರರು ಅವರನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಗಾಯದಿಂದಾಗಿ ಶ್ರೇಯಸ್​ಗೆ ವಿಶ್ರಾಂತಿ ನೀಡಿರುವ ಬಗ್ಗೆ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿಲ್ಲ. ಇದರಿಂದಾಗಿ ಅವರಿಗೆ ಕೊಕ್​ ನೀಡಿರುವುದು ಸ್ಪಷ್ಟವಾಗಿದೆ. ಶಾರ್ಟ್​ ಬಾಲ್​ ಎದುರು ದೌರ್ಬಲ್ಯ ಹೊಂದಿರುವುದರಿಂದ, ಶ್ರೇಯಸ್​ ಇದನ್ನು ಬಗೆಹರಿಸಿಕೊಳ್ಳುವವರೆಗೆ ಇನ್ನು ಸದ್ಯ ಟೆಸ್ಟ್​ ತಂಡಕ್ಕೆ ಮರಳುವುದಿಲ್ಲ ಎಂದೂ ಹೇಳಲಾಗಿದೆ. ಇಂಗ್ಲೆಂಡ್​ ವಿರುದ್ಧದ ಸರಣಿಯ ಬಳಿಕ ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದವರೆಗೂ ಭಾರತಕ್ಕೆ ಬೇರಾವುದೇ ಟೆಸ್ಟ್​ ಸರಣಿ ಇಲ್ಲ. ಇದು ಶ್ರೇಯಸ್​ಗೆ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ಹೆಚ್ಚಿನ ಸಮಯಾವಕಾಶವನ್ನೂ ಒದಗಿಸಿದೆ.

ಆಕಾಶ್​ ದೀಪ್​ ಹೊಸಮುಖ

ಬಂಗಾಳದ ವೇಗಿ ಆಕಾಶ್​ ದೀಪ್​ ಭಾರತ ಟೆಸ್ಟ್​ ತಂಡಕ್ಕೆ ಏಕೈಕ ಹೊಸಮುಖವಾಗಿದ್ದಾರೆ. ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಚತುರ್ದಿನ ಟೆಸ್ಟ್​ನಲ್ಲಿ ಭಾರತ ಎ ತಂಡದ ಮಿಂಚಿದ ಹಿನ್ನೆಲೆಯಲ್ಲಿ 27 ವರ್ಷದ ಆಕಾಶ್​ ದೀಪ್​ಗೆ ಅವಕಾಶ ಒಲಿದಿದೆ. ಬಿಹಾರ ಮೂಲದವರಾದ ಆಕಾಶ್​ ದೀಪ್​, 2010ರಲ್ಲಿ ಬಂಗಾಳಕ್ಕೆ ವಲಸೆ ಹೋಗಿದ್ದರು. ಅವರು ಇದುವರೆಗೆ ಆಡಿರುವ 29 ಪ್ರಥಮ ದರ್ಜೆ ಪಂದ್ಯಗಳಲ್ಲಿ 103 ವಿಕೆಟ್​ ಕಬಳಿಸಿದ್ದಾರೆ. ಆಕಾಶ್​ ದೀಪ್​ ಐಪಿಎಲ್​ನಲ್ಲಿ ಆರ್​ಸಿಬಿ ಆಟಗಾರರಾಗಿದ್ದಾರೆ. ಸದ್ಯ ಕೇರಳದಲ್ಲಿ ರಣಜಿ ಪಂದ್ಯ ಆಡುತ್ತಿರುವ ಆಕಾಶ್​ ದೀಪ್​, ೆ. 13ರಂದು ಭಾರತ ತಂಡ ಕೂಡಿಕೊಳ್ಳಲಿದ್ದಾರೆ.

ಸಿರಾಜ್​ ಇನ್​, ಆವೇಶ್​ ಔಟ್​

ಎರಡನೇ ಟೆಸ್ಟ್​ನಿಂದ ವಿಶ್ರಾಂತಿ ಪಡೆದಿದ್ದ ಮೊಹಮದ್​ ಸಿರಾಜ್​ ಕೊನೇ 3 ಟೆಸ್ಟ್​ಗಳಿಗೆ ಮರಳಿದ್ದು, ಮಧ್ಯಪ್ರದೇಶದ ವೇಗಿ ಆವೇಶ್​ ಖಾನ್​ರನ್ನು ಕೈಬಿಡಲಾಗಿದೆ. ಜಡೇಜಾ ವಾಪಸಾತಿಯ ನಡುವೆ ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್​ ಸೌರಭ್​ ಕುಮಾರ್​ ತಂಡದಿಂದ ಹೊರಬಿದ್ದಿದ್ದರೆ, ವಾಷಿಂಗ್ಟನ್​ ಸುಂದರ್​ 5ನೇ ಸ್ಪಿನ್ನರ್​ ಆಗಿ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಬುಮ್ರಾಗೆ ವಿಶ್ರಾಂತಿ ಇಲ್ಲ

ವಿಶಾಖಪಟ್ಟಣದಲ್ಲಿ ಆಂಗ್ಲರನ್ನು ಕಂಗೆಡಿಸಿದ್ದ ವೇಗಿ ಜಸ್​ಪ್ರೀತ್​ ಬುಮ್ರಾಗೆ 3ನೇ ಟೆಸ್ಟ್​ನಿಂದ ವಿಶ್ರಾಂತಿ ನೀಡಲಾಗುತ್ತದೆ ಎಂಬ ವರದಿಗಳು ಸುಳ್ಳಾಗಿವೆ. ಕೊನೇ 3 ಟೆಸ್ಟ್​ಗಳಿಗೂ ಅವರು ತಂಡದ ಉಪನಾಯಕರಾಗಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಸರಣಿಯ 4ನೇ ಅಥವಾ ಕೊನೇ ಪಂದ್ಯದಿಂದ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.

5 ಪಂದ್ಯಗಳ ಸರಣಿ ಸದ್ಯ 1-1 ಸಮಬಲದಲ್ಲಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಪ್ರವಾಸಿ ಇಂಗ್ಲೆಂಡ್​ ಗೆದ್ದಿದ್ದರೆ, ವಿಶಾಖಪಟ್ಟಣದಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಭಾರತ ಗೆದ್ದು ತಿರುಗೇಟು ನೀಡಿದೆ. ಸರಣಿಯ 3ನೇ ಟೆಸ್ಟ್​ನಲ್ಲಿ ಫೆಬ್ರವರಿ 15ರಿಂದ ರಾಜ್​ಕೋಟ್​ನಲ್ಲಿ ನಡೆಯಲಿದ್ದು, ಭಾರತ ತಂಡ ಭಾನುವಾರ ಮರಳಿ ಒಗ್ಗೂಡಲಿದೆ. 4ನೇ ಟೆಸ್ಟ್​ ಪಂದ್ಯ ರಾಂಚಿಯಲ್ಲಿ ಫೆಬ್ರವರಿ 23ರಿಂದ 27ರವರೆಗೆ ನಡೆಯಲಿದ್ದರೆ, 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಮಾರ್ಚ್​ 7ರಿಂದ 11ರವರೆಗೆ ಧರ್ಮಶಾಲಾದಲ್ಲಿ ನಿಗದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net