

ಚೆನ್ನೈ: ಸುಮಿತ್ ನಗಾಲ್ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದ್ದಾರೆ. ಈ ಮೂಲಕ ವೃತ್ತೀಜಿವನದಲ್ಲಿ ಅವರು ಮೊದಲ ಬಾರಿಗೆ ಎಟಿಪಿ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ಅಗ್ರ 100ರೊಳಗೆ ಪ್ರವೇಶ ಪಡೆದಿದ್ದಾರೆ. 26 ವರ್ಷದ ನಗಾಲ್, ಪ್ರಜ್ಞೇಶ್ ಗುಣೇಶ್ವರನ್ (2019) ಬಳಿಕ ಈ ಸಾಧನೆ ಮಾಡಿದ ಮೊದಲ ಮತ್ತು ಒಟ್ಟಾರೆ 10ನೇ ಭಾರತೀಯರೆನಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಗಾಲ್ ಇಟಲಿಯ ಲುಕಾ ನಾರ್ಡಿ ವಿರುದ್ಧ 6-1, 6-4 ನೇರಸೆಟ್ಗಳಿಂದ ಗೆಲುವು ಸಾಧಿಸಿದರು. ಇದು ಅವರಿಗೆ ವೃತ್ತೀಜಿವನದ 5ನೇ ಎಟಿಪಿ ಚಾಲೆಂಜರ್ ಪ್ರಶಸ್ತಿ ಗೆಲುವಾಗಿದೆ. ಸೋಮವಾರ ಪ್ರಕಟಗೊಳ್ಳಲಿರುವ ಪರಿಷತ ಎಟಿಪಿ ರ್ಯಾಂಕಿಂಗ್ನಲ್ಲಿ ನಗಾಲ್ 98ನೇ ಸ್ಥಾನ ಅಲಂಕರಿಸಲಿದ್ದಾರೆ. ಟೂರ್ನಿಗೆ ಮುನ್ನ ಅವರು 121ನೇ ರ್ಯಾಂಕ್ನಲ್ಲಿದ್ದರು.
ಕಳೆದ ವರ್ಷವಷ್ಟೇ ಪ್ರಾಯೋಜಕರ ಕೊರತೆಯಿಂದಾಗಿ ತನ್ನ ಬ್ಯಾಂಕ್ ಖಾತೆಯಲ್ಲಿ 80 ಸಾವಿರ ರೂ. ಮಾತ್ರ ಉಳಿದಿದೆ ಎಂದು ಅಳಲು ತೋಡಿಕೊಂಡಿದ್ದ ನಗಾಲ್, ಹಾಲಿ ವರ್ಷಾರಂಭದಲ್ಲಿ ಆಸ್ಟ್ರೆಲಿಯನ್ ಓಪನ್ ಮೊದಲ ಸುತ್ತಿನಲ್ಲಿ ಶ್ರೇಯಾಂಕಿತ ಆಟಗಾರನಿಗೆ ಸೋಲುಣಿಸಿ ಗಮನಸೆಳೆದಿದ್ದರು. ನಂತರ 2ನೇ ಸುತ್ತಿನಲ್ಲಿ ಹೊರಬಿದ್ದಿದ್ದರೂ, ಸುಮಾರು 1 ಕೋಟಿ ರೂ. ಬಹುಮಾನ ಮೊತ್ತ ಒಲಿಸಿಕೊಂಡಿದ್ದರು.