

ನವದೆಹಲಿ: ಭಾರತದ ಅಗ್ರ ಇಬ್ಬರು ಸಿಂಗಲ್ಸ್ ಆಟಗಾರರಾದ ಸುಮಿತ್ ನಗಾಲ್ ಮತ್ತು ಶಶಿಕುಮಾರ್ ಮುಕುಂದ್ ಡೇವಿಸ್ ಕಪ್ನಲ್ಲಿ ಮುಂದಿನ ಪಂದ್ಯವನ್ನು ಆಡಲು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದಾರೆ. ಇದರಿಂದಾಗಿ ಗೊಂದಲಕ್ಕೀಡಾಗಿರುವ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತನ್ನ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧರಿಸಿದೆ.
ಭಾರತ ತಂಡ ಫೆಬ್ರವರಿಯಲ್ಲಿ ಪಾಕಿಸ್ತಾನದಲ್ಲಿ ವಿಶ್ವಗುಂಪು&1ರ ಪ್ಲೇಆ್ ಪಂದ್ಯ ಆಡಬೇಕಿದೆ. ವಿಶ್ವ ನಂ. 141 ಸುಮಿತ್ ನಗಾಲ್ ಸದ್ಯ ಭಾರತದ ಅಗ್ರ ಸಿಂಗಲ್ಸ್ ಆಟಗಾರರಾಗಿದ್ದಾರೆ. ಶಶಿಕುಮಾರ್ 477ನೇ ರ್ಯಾಂಕ್ ಹೊಂದಿದ್ದು, 2ನೇ ಗರಿಷ್ಠ ಶ್ರೇಯಾಂಕಿತ ಭಾರತೀಯರಾಗಿದ್ದಾರೆ. ಇವರಿಬ್ಬರು ಪಾಕ್ನಲ್ಲಿ ಆಡದಿರಲು ನಿಖರ ಕಾರಣ ತಿಳಿಸಿಲ್ಲ.
ಇವರ ಗೈರಿನಲ್ಲಿ ರಾಮ್ಕುಮಾರ್ ರಾಮನಾಥನ್ ಭಾರತ ತಂಡದ ಸವಾಲನ್ನು ಮುನ್ನಡೆಸಬೇಕಾಗುತ್ತದೆ ವಿಶ್ವಗುಂಪು-1ರಲ್ಲಿ ಉಳಿಯಲು ಭಾರತಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಈ ಪಂದ್ಯವನ್ನು ಪಾಕಿಸ್ತಾನದಿಂದ ಬೇರೆಡೆ ಸ್ಥಳಾಂತರಿಸಲು ಎಐಟಿಎ ಇದುವರೆಗೆ ನಡೆಸಿರುವ ಪ್ರಯತ್ನಗಳು ವಿಫಲವಾಗಿವೆ.