ಕಳೆದುಕೊಂಡಿದ್ವಿ ಅಂದುಕೊಂಡಿದ್ದೆ.. ವರ್ಷಗಳ ಕಾಲ ಹುಡುಕಾಡುತ್ತಿದ್ದುದು ಈಗ ಸಿಕ್ತು: ಸುಮಲತಾ ಅಂಬರೀಷ್

Ambareesh Dhoni
Published on

ಬೆಂಗಳೂರು: ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಆಸಕ್ತಿಕರ ಸಂಗತಿ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಕೂಡ ಅವರು ಅತ್ಯಂತ ವಿಶೇಷ ಸಂಗತಿಯೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

ಪತಿ, ನಟ ಅಂಬರೀಷ್​ ಖ್ಯಾತ ಕ್ರಿಕೆಟಿಗ ಎಂ.ಎಸ್.ಧೋನಿಗೆ ಬಹಳ ಹಿಂದೆ ಒಮ್ಮೆ ಚೆಕ್ ವಿತರಿಸಿದ್ದ ಫೋಟೋವೊಂದನ್ನು ಸುಮಲತಾ ಇಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಇಂಥದ್ದೊಂದು ಬೆಲೆ ಕಟ್ಟಲಾಗದ ಫೋಟೋ ಇಂದು ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.

2006ರಲ್ಲಿ ಉದಯೋನ್ಮುಖ ಕ್ರಿಕೆಟಿಗರಾಗಿದ್ದ ಎಂ.ಎಸ್​.ಧೋನಿಗೆ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ಅಂಬರೀಷ್​ 2 ಲಕ್ಷ ರೂಪಾಯಿಯ ಚೆಕ್ ನೀಡಿದ್ದಾಗಿನ ಚಿತ್ರವಿದು ಎಂದು ಅವರು ಫೋಟೋದ ಹಿನ್ನೆಲೆಗೆ ಸಂಬಂಧಿಸಿದ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ.

'ಧೋನಿ ಈಗ ಜನಪ್ರಿಯರಾಗುತ್ತಿದ್ದಾರೆ, ಮನೆಗೆ ಸಾಕಷ್ಟು ಸಂದರ್ಶಕರು ಬರುತ್ತಿದ್ದಾರೆ, ಆದರೆ ಅವರಿಗೆ ನೀಡಲು ಸಾಕಷ್ಟು ಆಸನಗಳಿಲ್ಲ' ಎಂದು ಧೋನಿ ಅವರ ತಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ದೊಡ್ಡ ಕ್ರೀಡಾ ಮತ್ತು ಕ್ರಿಕೆಟ್ ಅಭಿಮಾನಿಯಾಗಿದ್ದ ಅಂಬರೀಷ್ ಅವರನ್ನು ಸಂಪೂರ್ಣವಾಗಿ ಪ್ರೇರೇಪಿಸಿತು ಎಂದು ಸುಮಲತಾ ಸ್ಮರಿಸಿಕೊಂಡಿದ್ದಾರೆ.

ನಾನು ಈ ಫೋಟೋ ಕಳೆದುಕೊಂಡಿದ್ವಿ ಅಂದ್ಕೊಂಡಿದ್ದೆ, ಇದಕ್ಕೋಸ್ಕರ ಕೆಲವು ವರ್ಷಗಳಿಂದ ಹುಡುಕಾಡುತ್ತಿದ್ದೆವು. ಇಂದು ಇದ್ದಕ್ಕಿದ್ದಂತೆ ಈ ಫೋಟೋ ಸಿಕ್ಕಿತು, ತುಂಬಾ ನೆನಪುಗಳು ಮರುಕಳಿಸಿದವು ಎಂದಿರುವ ಸುಮಲತಾ, ಧೋನಿಯನ್ನು ಟ್ಯಾಗ್ ಮಾಡಿ, 'ನಿಮಗಿದು ನೆನಪಿರುವುದು ಅನುಮಾನ, ಆದರೆ ನಿಮ್ಮ ಪ್ರಯಾಣದ ಕುರಿತು ತುಂಬಾ ಹೆಮ್ಮೆ ಇದೆ' ಎಂದೂ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net