

ನವದೆಹಲಿ/ಶಿವಮೊಗ್ಗ: ಕನ್ನಡಿಗ ಸುಹಾಸ್ ಯತಿರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸುವ ಮೂಲಕ ಹೊಸ ಇತಿಹಾಸ ನಿರ್ವಿುಸಿದ್ದಾರೆ. ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಅವರ ಸಾಧನೆಗೆ ಇಡೀ ಕರ್ನಾಟಕವೇ ಈಗ ಹೆಮ್ಮೆ ಪಡುತ್ತಿದೆ. ಅವರು ಕರ್ನಾಟಕದ ವಿವಿಧ ಭಾಗಗಳ ಜತೆಗೆ ಈಗಲೂ ವಿಶೇಷ ನಂಟು ಹೊಂದಿದ್ದಾರೆ.
ಸುಹಾಸ್ ಯತಿರಾಜ್ ಸಾಧನೆಯ ಹಾದಿಯಲ್ಲಿ ಹಲವು ಸವಾಲುಗಳನ್ನು ಗೆದ್ದು ಮುನ್ನಡೆದಿದ್ದಾರೆ. ಅವರಿಗೆ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಕ್ಷೇತ್ರದ ಅವಕಾಶದ ಬಾಗಿಲು ತೆರೆದಿದ್ದು ಆಜಂಗಢದಲ್ಲಿ. 2016ರಲ್ಲಿ ಅವರು ಅಜಂಗಢ ಜಿಲ್ಲಾಧಿಕಾರಿಯಾಗಿದ್ದರು. ಆಗ ಪ್ಯಾರಾ ಬಚ್ಯಾಡ್ಮಿಂಟನ್ ಪಂದ್ಯಾವಳಿಯೊಂದಕ್ಕೆ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಬ್ಯಾಡ್ಮಿಂಟನ್ನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಸುಹಾಸ್, ತಾವೂ ಪಂದ್ಯಾವಳಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಅಚ್ಚರಿ ಎಂದರೆ ರಾಜ್ಯ ಮಟ್ಟದ ಆಟಗಾರರನ್ನು ಸೋಲಿಸಿದ ಸುಹಾಸ್ ಎಲ್ಲರ ಗಮನ ಸೆಳೆದಿದ್ದರು. ಅಂದು ಸುಹಾಸ್ ಆಟವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಈಗಿನ ಭಾರತ ತಂಡದ ಕೋಚ್ ಗೌರವ್ ಖನ್ನಾ, ಹೆಚ್ಚೆಚ್ಚು ಪಂದ್ಯಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು. ಅದೇ ವರ್ಷದಂದು ಬೀಜಿಂಗ್ ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡಿದ್ದ ಸುಹಾಸ್ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಬಳಿಕ 2018ರ ಜಕಾರ್ತಾ ಏಷ್ಯಾ ಪ್ಯಾರಾ ಗೇಮ್ಸ್ನಲ್ಲೂ ಕಂಚು ಗಳಿಸಿ ಈ ಸಾಧನೆ ಮಾಡಿದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಉತ್ತರಪ್ರದೇಶ ಸರ್ಕಾರ 2016ರ ಡಿ.1ರಂದು ಅಲ್ಲಿನ ಅತ್ಯುನ್ನತವಾದ ‘ಯಶ್ ಭಾರತಿ’ ಪುರಸ್ಕಾರ ನೀಡಿ ಗೌರವಿಸಿತ್ತು.
ಐಪಿಎಸ್ ಅಧಿಕಾರಿಯಾಗಿದ್ದುಕೊಂಡು ಕೆಲಸದ ಒತ್ತಡದ ಮಧ್ಯೆ ಬ್ಯಾಡ್ಮಿಂಟನ್ ಆಟಕ್ಕೆ ಗಮನ ಕೊಡುವುದು ಸವಾಲಾಗಿತ್ತು. ಹಾಗಿದ್ದರೂ ಆಟದ ಮೇಲಿನ ಫೋಕಸ್ ಅನ್ನು ಅವರು ಎಂದೂ ಕಳೆದುಕೊಂಡಿರಲಿಲ್ಲ. ರಾತ್ರಿ 10ರಿಂದ 12 ಗಂಟೆ ತನಕದ ಅವಧಿಯನ್ನು ಬ್ಯಾಡ್ಮಿಂಟನ್ ಪ್ರಾಕ್ಟೀಸ್ಗಾಗಿ ಮೀಸಲಿಡುತ್ತಿದ್ದರು. ನೋಯ್ಡಾದ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಕರೊನಾ ನಿಯಂತ್ರಣ ಕಾರ್ಯದಲ್ಲೂ ಚುರುಕುತನ ತೋರಿರುವ ಸುಹಾಸ್ ಯತಿರಾಜ್ ಸಿಎಂ ಯೋಗಿ ಆದಿತ್ಯನಾಥ್ ಮೆಚ್ಚುಗೆಗೂ ಪಾತ್ರರಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಸುಹಾಸ್ ಎಂದಿಗೂ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಕಡಿಮೆ ಮಾಡಿರಲಿಲ್ಲ. ಕಳೆದ 6 ವರ್ಷದ ಅವಿರತ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾವೆಲ್ಲ ಹಬ್ಬದ ಮೂಡ್ನಲ್ಲಿದ್ದರೆ ಸುಹಾಸ್ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಮಾಡುತ್ತಿದ್ದರು ಎಂದು ಅವರ ಪತ್ನಿ, ಗಾಜಿಯಾಬಾದ್ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿತು ಯತಿರಾಜ್ ಸಂತಸ ಹಂಚಿಕೊಂಡಿದ್ದಾರೆ.
ಒಂದು ಕಾಲಿನ ಅಂಗವೈಕಲ್ಯ: ಹುಟ್ಟಿನಿಂದಲೂ ಸುಹಾಸ್ ಬಲ ಕಾಲಿನ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಮೊಣಕಾಲಿನ ಕೆಳಭಾಗ ನೂನ್ಯತೆ ಹೊಂದಿರುವವರು ಎಸ್ಎಸ್ಎಲ್-4 ವಿಭಾಗದಲ್ಲಿ ಸ್ಪರ್ಧಿಬಹುದಾಗಿದೆ. ಕಾಲಿನ ಅಂಗವೈಕಲ್ಯ ಹೊಂದಿದ್ದರಿಂದ, ಆಟಗಾರರಿಗೆ ಕೋರ್ಟ್ ಪೂರ್ತಿ ನಿಗದಿ ಪಡಿಸಲಾಗಿತ್ತು.
ಶಿವಮೊಗ್ಗದಿಂದ ಯುಪಿವರೆಗೆ...: ಶಿವಮೊಗ್ಗ ವಿನೋಬಾನಗರದ ನಿವಾಸಿ ಸುಹಾಸ್, ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಬಳಿಕ ಸುರತ್ಕಲ್ನ ಎನ್ಐಟಿಕೆ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. ಬಳಿಕ ಎಸ್ಎಪಿ ಲ್ಯಾಬ್ನಲ್ಲಿ ಉದ್ಯೋಗ ಮಾಡುತ್ತಲೇ 2007ರಲ್ಲಿ ಐಎಎಸ್ ಪೂರೈಸಿದರು. ತಾಯಿ ಜಯಶ್ರೀ ಹಾಗೂ ಸಹೋದರ ಶರತ್ ನೀಡಿದ ಬೆಂಬಲವನ್ನು ಈಗಲೂ ಸುಹಾಸ್ ನೆನೆಯುತ್ತಾರೆ.
ಶಿವಮೊಗ್ಗ, ಹಾಸನದಲ್ಲಿ ಸಂಭ್ರಮ: ಸುಹಾಸ್ ಅವರ ಕುಟುಂಬದ ತವರೂರು ಅರಸೀಕೆರೆ ತಾಲೂಕಿನ ಲಾಳನಕೆರೆ ಮತ್ತು ಅವರು ವಿಶೇಷ ನಂಟು ಹೊಂದಿರುವ ಶಿವಮೊಗ್ಗದ ವಿನೋಬನಗರ ಬಡಾವಣೆ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು.
2 ತಿಂಗಳಿಂದ ತೀವ್ರ ಅಭ್ಯಾಸ: ‘ಪ್ಯಾರಾಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಕಾರಣಕ್ಕಾಗಿ ಸುಹಾಸ್ ಎರಡು ತಿಂಗಳಿನಿಂದಲೂ ಅಭ್ಯಾಸಕ್ಕೆ ಹೆಚ್ಚು ಸಮಯ ನೀಡುತ್ತಿದ್ದ. ಆತನ ಪ್ರಯತ್ನ ಈಗ ಫಲ ನೀಡಿದೆ’ ಎಂದು ಜಯಶ್ರೀ ಹೇಳಿದರು. ‘ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಉತ್ತಮ ಹೆಸರು ಗಳಿಸಿದ್ದಾನೆ. ರಾಜ್ಯದ ವಿವಿಧೆಡೆ ಕೆಲಸ ಮಾಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನನ್ನ ಪುತ್ರನ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಕೋವಿಡ್- 19 ನಿಯಂತ್ರಣ ಕ್ರಮಗಳ ಜಾರಿಗಾಗಿ ಆತನನ್ನು ಗೌತಮ ಬುದ್ಧ ನಗರಕ್ಕೆ ನಿಯೋಜಿಸಲಾಗಿದೆ’ ಎಂದು ತಿಳಿಸಿದರು. ಸುಹಾಸ್ ಅವರ ತಂದೆ ಯತಿರಾಜ್, ತುಂಗಾ ಮೇಲ್ದಂಡೆ ಯೋಜನೆಯಲ್ಲಿ (ಜಲಸಂಪನ್ಮೂಲ ಇಲಾಖೆ) ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸುಹಾಸ್ರ ಕಿರಿಯ ಸಹೋದರ ಶರತ್ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ.