

ಚೆನ್ನೈ: ಸುಧಾಕರ್ ಎಂ. (11 ಅಂಕ), ಸಚಿನ್ (7) ಮತ್ತು ಮಂಜೀತ್ (8) ಭರ್ಜರಿ ರೈಡಿಂಗ್ ಎದುರು ಮಂಕಾದ ತಮಿಳ್ ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ತವರು ಚರಣದಲ್ಲಿ ಸೋಲಿನ ಆರಂಭ ಕಂಡಿದೆ. ತಮಿಳ್ ತಲೈವಾಸ್ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಪಟನಾ ಪೈರೇಟ್ಸ್ ಎದುರು 33-46 ಅಂಕಗಳಿಂದ ಪರಾಭವಗೊಂಡಿತು.
ಎಸ್ಡಿಎಟಿ ಮಲ್ಟಿ ಪರ್ಪಸ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಚರಣದ ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ ತಂಡ ಮೊದಲಾರ್ಧದಲ್ಲಿ ಜಿದ್ದಾಜಿದ್ದಿನ ಹೋರಾಟ ತೋರಿ 20-21ರಿಂದ ಹಿನ್ನಡೆ ಅನುಭವಿಸಿತು. ಆದರೆ ದ್ವೀತಿಯಾರ್ಧದಲ್ಲಿ ತಲೈವಾಸ್ ತಂಡವನ್ನು 2 ಬಾರಿ ಆಲೌಟ್ ಮಾಡುವ ಮೂಲಕ ಪಟನಾ ಪ್ರಾಬಲ್ಯ ಮೆರೆಯಿತು.
ತಲೈವಾಸ್ ಪರ ಹಿಮಾಂಶು (8), ಅಜಿಂಕ್ಯ ಪವಾರ್ (6), ಹಿಮಾಂಶು ನರ್ವಾಲ್ (6) ಹೋರಾಟ ವ್ಯರ್ಥಗೊಂಡಿತು.