ಭಾರತ V/S ಪಾಕ್​ ಪಂದ್ಯ ನೋಡುವುದನ್ನು ಅರ್ಧದಲ್ಲೇ ನಿಲ್ಲಿಸಿದೆ : ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ! | Sourav Ganguly

Sourav Ganguly
Published on

Sourav Ganguly : ಭಾನುವಾರ (ಸೆಪ್ಟೆಂಬರ್​ 14) ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕಪಕ್ಷೀಯ ಪಂದ್ಯವನ್ನು ನಾನು ಅರ್ಧದಲ್ಲೇ ನೋಡುವುದನ್ನು ನಿಲ್ಲಿಸಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಸೌರವ್​ ಗಂಗೂಲಿ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಂಗೋಲಿ, ವಾಸ್ತವವಾಗಿ ನಾನು ಪಂದ್ಯವನ್ನು ವೀಕ್ಷಿಸುವುದರಿಂದ ನನಗೆ ಆಶ್ಚರ್ಯವಿಲ್ಲ. ಆದರೆ, 15 ಓವರ್​ಗಳ ನಂತರ ನಾನು ಕ್ರಿಕೆಟ್​ ನೋಡುವುದನ್ನು ನಿಲ್ಲಿಸಿ, ಇಂಗ್ಲಿಷ್​ ಪ್ರೀಮಿಯರ್​​ ಲೀಗ್​ ನೋಡಲು ಪ್ರಾರಂಭಿಸಿದೆ ಎಂದು ಹೇಳಿದರು.

ಇನ್ನು ಮುಂದೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯವು ಪೈಪೋಟಿಯಾಗಿರುವುದಿಲ್ಲ ಎಂದು ಹೇಳಿದ ಅವರು, ಪಾಕಿಸ್ತಾನ ಕ್ರಿಕೆಟ್​ ಬಗ್ಗೆ ಮಾಜಿ ಅಧ್ಯಕ್ಷರು ಪ್ರಾಮಾಣಿಕ ಮೌಲ್ಯಮಾಪನವನ್ನು ನೀಡಿದ್ದಾರೆ. ಪಾಕಿಸ್ತಾನದ ತಂಡದಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಆ ತಂಡದಲ್ಲಿ ಗುಣಮಟ್ಟದ ಕೊರೆತೆ ಇದೆ ಎಂದು ಗೌರವದಿಂದ ಹೇಳುತ್ತೇನೆ. ಏಕೆಂದರೆ ಆ ತಂಡವನ್ನು ನಾನು ನೋಡಿದ್ದೇನೆ ಎಂದರು.

ಇನ್ನು ಮುಂದೆ ಯಾವುದೇ  ಸ್ಪರ್ಧೆ ಇಲ್ಲ!

ಭಾರತ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ ಅಥವಾ ಅಫ್ಘಾನಿಸ್ತಾನದೊಂದಿಗೆ ಆಡುವುದನ್ನು ನಾನು ನೋಡುತ್ತೇನೆ. ಇನ್ನು ಮುಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಸ್ಪರ್ಧೆ ಎಂದು ನಾನು ಭಾವಿಸುವುದಿಲ್ಲ. ಈ ಮೊದಲು ನಾವು ಅದನ್ನು ಪ್ರಚಾರ ಮಾಡುತ್ತಲೇ ಇರುತ್ತಿದ್ದೆವು ಆದರೆ, ಕಳೆದ 5 ವರ್ಷಗಳಿಂದ ಪ್ರಚಾರವನ್ನು ನಿಲ್ಲಿಸಿದ್ದೇನೆ ಎಂದು ಗಂಗೂಲಿ ಹೇಳಿದರು.

ಸೋಮವಾರ ಓಮನ್ ತಂಡ ಯುಎಇ ವಿರುದ್ಧ ಸೋತ ನಂತರ, ಟೀಮ್ ಇಂಡಿಯಾ ಏಷ್ಯಾ ಕಪ್ 2025 ರ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಉಳಿದ ಪಂದ್ಯಗಳ ಫಲಿತಾಂಶ ಏನೇ ಇರಲಿ, ಈ ಫಲಿತಾಂಶವು ಭಾರತದ ಗುಂಪಿನಲ್ಲಿ ಅಗ್ರಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಪಾಕಿಸ್ತಾನ ಮತ್ತು ಯುಎಇ ನಡುವೆ ಸೂಪರ್ 4 ಹಂತಕ್ಕೆ ಗ್ರೂಪ್ ಎ ನಿಂದ ಅಂತಿಮ ಅರ್ಹತಾ ಸ್ಥಾನಕ್ಕಾಗಿ ಸ್ಪರ್ಧೆಯು (ಸೆಪ್ಟೆಂಬರ್ 17) ಬುಧವಾರ ನಡೆಯಲಿದ್ದು, ಈ ವೇಳೆ ಮೈದಾನಕ್ಕೆ ಇಳಿಯಬೇಕೆ ಅಥವಾ ಬೇಡವೇ ಎಂಬುದನ್ನು ಪಾಕಿಸ್ತಾನ ಇನ್ನೂ ನಿರ್ಧರಿಸಿಲ್ಲ. ಭಾರತದ ವಿರುದ್ಧದ ಹ್ಯಾಂಡ್​ಶೇಕ್​ ನಾಟಕದ ನಂತರ ಪಿಸಿಬಿ ಏಷ್ಯಾಕಪ್​ ಪಂದ್ಯಾವಳಿಯಿಂದ ಹೊರಗುಳಿಯುದಾಗಿ ಬೆದರಿಕೆ ಹಾಕಿದೆ ಎಂದು ವರದಿಯಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಆಟಗಾರರು ತಮ್ಮ ಪಾಕಿಸ್ತಾನಿ ಎದುರಾಳಿಗಳೊಂದಿಗೆ ಹ್ಯಾಂಡ್‌ಶೇಕ್ ಮಾಡಲು ಸಾಮೂಹಿಕವಾಗಿ ನಿರಾಕರಿಸಿದರು. ನಂತರ ಈ ವಿಚಾರದ ಬಗ್ಗೆ ಪಾಕಿಸ್ತಾನವು ಐಸಿಸಿಗೆ ಔಪಚಾರಿಕ ದೂರು ನೀಡಿತು, ಈ ಕೃತ್ಯವನ್ನು "ಕ್ರೀಡಾರಹಿತ" ಎಂದು ಕರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net