

ದುಬೈ: ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಸಮಯ ಪಾಲನೆಗೆ ಜಾರಿಗೆ ತಂದಿರುವ "ಸ್ಟಾಪ್ ಕ್ಲಾಕ್' ನಿಯಮ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದ ಮೂಲಕ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ಖಚಿತಪಡಿಸಿದೆ.
ಸ್ಟಾಪ್ ಕ್ಲಾಕ್ ನಿಯಮ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಡಿಸೆಂಬರ್ 2023 ರಿಂದ ಏಪ್ರಿಲ್ 2024ರವರೆಗೆ ಒಟ್ಟು 59 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಜಾರಿಯಲ್ಲಿ ಇರಲಿದೆ. ನೂತನ ನಿಯಮದ ಅನ್ವಯ ಬೌಲಿಂಗ್ ಮಾಡುವ ತಂಡ ಇನಿಂಗ್ಸ್ ಒಂದರಲ್ಲಿ ಮುಂದಿನ ಓವರ್ ಆರಂಭಿಸಲು 60 ಸೆಕೆಂಡ್ ಸಮಯದ ಮಿತಿಯನ್ನು ಹೊಂದಿರಲಿದೆ.
ಒಂದು ವೇಳೆ ಈ ಸಮಯದ ಮಿತಿಯನ್ನು 3 ಬಾರಿ ಮೀರಿದರೆ 5 ರನ್ಗಳ ದಂಡ ಶಿಕ್ಷೆಗೆ ಗುರಿಯಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ವೇಗವನ್ನು ಸುಧಾರಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಸಿ ಜನರಲ್ ಮ್ಯಾನೇಜರ್ ವಸೀಂ ಖಾನ್ ತಿಳಿಸಿದ್ದಾರೆ.