10 ಓವರ್​ವರೆಗೂ ಸಾಧ್ಯವೇ ಇಲ್ಲ! ಧೋನಿ ವಿರುದ್ಧ ಟೀಕೆಗಳ ಸುರಿಮಳೆ; ಕಡೆಗೂ ಸತ್ಯ ಸಂಗತಿ ಬಿಚ್ಚಿಟ್ಟ ಫ್ಲೆಮಿಂಗ್​ | MS Dhoni

ವಿಜಯವಾಣಿ - 2025-03-31T195004.017
Published on

MS Dhoni: ಐಪಿಎಲ್​ 18ನೇ ಆವೃತ್ತಿ ಆರಂಭಗೊಂಡು ಇಂದಿಗೆ 11 ದಿನಗಳು ಕಳೆದಿವೆ. ಆಗಲೇ ಮೂರು ಪಂದ್ಯಗಳನ್ನಾಡಿರುವ ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಒಂದು ಪಂದ್ಯ ಗೆದ್ದು, ಇನ್ನೆರೆಡು ಮ್ಯಾಚ್​ಗಳನ್ನು ಹೀನಾಯವಾಗಿ ಸೋತಿದೆ. ಆರ್​ಸಿಬಿ ವಿರುದ್ಧ 50 ರನ್​ಗಳ ಅಂತರದಲ್ಲಿ ಸೋತ ಸಿಎಸ್​ಕೆ, 6 ರನ್​ಗಳಿಂದ ಆರ್​ಆರ್​ ಎದುರು ಮಂಡಿಯೂರಿತು. ಈ ಸಂಗತಿ ಸದ್ಯ ಫ್ರಾಂಚೈಸಿಯ ಅಭಿಮಾನಿಗಳನ್ನು ಮಂಕಾಗಿಸಿದೆ. ಇದೆಲ್ಲದರ ಮಧ್ಯೆ ಮಾಜಿ ಕ್ಯಾಪ್ಟನ್​, ದಿಗ್ಗಜ, ಮಹೇಂದ್ರ ಸಿಂಗ್ ಧೋನಿಯನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ.

ಎರಡನೇ ಪಂದ್ಯದಲ್ಲಿ ಆರ್​ಸಿಬಿ ಎದುರು ಕಣಕ್ಕಿಳಿದ ಧೋನಿ, 9ನೇ ಕ್ರಮಾಂಕದಲ್ಲಿ ತಂಡದ ಪರ ಬ್ಯಾಟ್​ ಮಾಡಿದರು. ಇದನ್ನು ಪ್ರಶ್ನಿಸಿ ಟೀಕಿಸಿದ ಅನೇಕರು, ದಿಗ್ಗಜನನ್ನು ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ವ್ಯಂಗ್ಯವಾಡಿದರು. ಇಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡುವ ಧೋನಿ 5 ಅಥವಾ 6ನೇ ಕ್ರಮಾಂಕದಲ್ಲಿ ಆಡಬೇಕಿತ್ತು. ಆಗ ಪ್ರಾಯಶಃ ಆರ್​ಸಿಬಿ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಬಹುದಿತ್ತು ಎಂದು ಅಭಿಪ್ರಾಯಿಸಿದ್ದಾರೆ. ಇನ್ನೂ ಕೆಲವರು, ಫ್ರಾಂಚೈಸಿಗೆ ಧೋನಿಯನ್ನು 5-6 ಕ್ರಮಾಂಕದಲ್ಲಿ ಹೋಗಲು ಹೇಳುವ ಧೈರ್ಯವಿಲ್ಲ ಎಂದು ಕಿಡಿಕಾರಿದ್ದರು. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿದ ಸಿಎಸ್​ಕೆ ಕೋಚ್​ ಸ್ಟೀಫನ್​ ಫ್ಲೇಮಿಂಗ್​, ಕಡೆಗೂ ಇದಕ್ಕೆಲ್ಲ ಖಡಕ್​ ತಿರುಗೇಟು ನೀಡಿದ್ದಾರೆ.

"ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಕಳಿಸಿ ಎಂಬ ನಿರೀಕ್ಷೆಗಳು ತಪ್ಪು. ಅಭಿಮಾನಿಗಳು ಅಥವಾ ಕ್ರಿಕೆಟ್ ಪ್ರಿಯರು ಇಂತಹ ನಿರೀಕ್ಷೆಗಳನ್ನು ಮೊದಲು ಬಿಡಬೇಕು. ಅವರ ದೇಹ ಮುಂಚಿನಂತೆ ಇಲ್ಲ. ಮೊಣಕಾಲಿನ ಇಂಜುರಿ ಬಳಿಕವು ತಂಡದ ಪರ ಆಡಲು ನಿರ್ಧರಿಸಿದ್ದಾರೆ. ಈ ಹಿಂದಿನಂತೆ ಆಡುವುದು ಕಷ್ಟಸಾಧ್ಯ. ಆದರೂ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ" ಎಂದರು.

"ಪ್ರಸ್ತುತ ಧೋನಿ 10 ಓವರ್‌ವರೆಗೂ ಆಡಲು ಸಾಧ್ಯವೇ ಇಲ್ಲ. ಆ ಮಟ್ಟದ ಬ್ಯಾಟಿಂಗ್ ಮಾಡುವುದು ಅವರಿಂದ ಕಷ್ಟಕರ. ಹೀಗಾಗಿ, ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಆಟಕ್ಕೆ ತಕ್ಕಂತೆ ಧೋನಿಯನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸುತ್ತೇವೆ. ಕಳೆದ ವರ್ಷವೇ ನಾನು ಹೇಳಿದ್ದೆ. ನಮ್ಮ ತಂಡಕ್ಕೆ ಧೋನಿ ಅತ್ಯಮೂಲ್ಯ. ಅವರ ನಾಯಕತ್ವ, ವಿಕೆಟ್​ ಕೀಪಿಂಗ್​ ಕೌಶಲ್ಯಗಳು ಅದ್ಭುತ. ಅದರ ಬಗ್ಗೆ ಎರಡನೇ ಮಾತಿಲ್ಲ" ಎಂದು ಫ್ಲೆಮಿಂಗ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net