

ಬೆಂಗಳೂರು: ಜನವರಿ 7ರಂದು ನಡೆಯಲಿರುವ ಯುನಿವರ್ಸಲ್ ಫಸ್ಟ್ ಏಜ್ ಮಕ್ಕಳ ರಾಜ್ಯ ಮಟ್ಟದ ಚೆಸ್ ಟೂರ್ನಿಯನ್ನು ವಿಶಿಷ್ಟವಾಗಿ ಅನಾವರಣಗೊಳಿಸಲಾಯಿತು. ರಾಜ್ಯ ಸಭಾ ಸದಸ್ಯ, ಕವಿ, ಬರಹಗಾರ ಎಲ್. ಹನುಮಂತಯ್ಯ ಚೆಸ್ ಕಾಯಿಗಳನ್ನು ನಡೆಸಿ ಟೂರ್ನಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ಕೂಡಾ ಈ ಸಂದರ್ಭದಲ್ಲಿ ನೆರೆದಿದ್ದ ಅತಿಥಿಗಳ ಜೊತೆಗೆ ಚೆಸ್ ಆಡಿದರು. ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜಿನ ಗುರುರಾಯನಪುರ, ಕೋಳೂರು, ರಾಮೋಹಳ್ಳಿ ಕ್ಯಾಂಪಸ್ ನಲ್ಲಿ ಜನವರಿ ೭ರಂದು ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು ಆರು ವಿಭಾಗಗಳಲ್ಲಿ ನಾಲ್ಕು ನೂರಕ್ಕೂ ಅಧಿಕ ಚೆಸ್ ಪಟುಗಳು ಪಾಲ್ಗೊಳ್ಳಲಿದ್ದಾರೆ.
ವಿವಿಧ ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ತರಬೇತಿಗೆ ಪ್ರಸಿದ್ದವಾಗಿರುವ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಆಯೋಜಿಸುತ್ತಿರುವ ಈ ಚೆಸ್ ಟೂರ್ನಿ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಲಿದೆ. ಟೂರ್ನಿಯ ಒಟ್ಟು ಸುತ್ತುಗಳ ಸಂಖ್ಯೆ ಮತ್ತು ಸುತ್ತಿನ ವೇಳಾಪಟ್ಟಿಯನ್ನು ಅಂದು ಬೆಳಗ್ಗೆ ಅಲ್ಲೇ ಪ್ರಕಟಿಸಲಾಗುತ್ತದೆ.
ಒಟ್ಟು ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು 120 ಟ್ರೋಫಿಗಳನ್ನು ವಿಜೇತರಿಗೆ ವಿತರಿಸಲಾಗುವುದು. ಫಿಡೆಯ ಇತ್ತೀಚಿನ ನಿಯಮಗಳ ಪ್ರಕಾರ ಸ್ಪರ್ಧೆ ನಡೆಯಲಿದ್ದು, ಸ್ವಿಸ್ ವ್ಯವಸ್ಥೆಯನ್ನು ಅನುಸರಿಸಲಾಗುವುದು. 7, 9, 11, 13, 15 ಮತ್ತು 19 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ವಿಭಾಗದಲ್ಲಿ 10 ಟ್ರೋಫಿಗಳನ್ನು ನೀಡಲಾಗುವುದು.
ಶ್ರೀಪಾದ್ ಕೆ.ವಿ. ಅವರು ಕಾರ್ಯಕ್ರಮದ ಮುಖ್ಯ ತೀರ್ಪುಗಾರರಾಗಿದ್ದಾರೆ. ಆಸಕ್ತರು ಜನವರಿ 5ರ ಸಂಜೆ 6 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳಬಹುದು. "ಸ್ಥಳದಲ್ಲಿ ನೋಂದಣಿ ಅವಕಾಶವಿಲ್ಲ" ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಭಾಗವಹಿಸುವ ಎಲ್ಲ ಆಟಗಾರರಿಗೆ ಇ - ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಸಮೀಪದ ಚಲ್ಲಘಟ್ಟ ಮೆಟ್ರೊ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಯಾಣ ಸೌಲಭ್ಯ ಕಲ್ಪಿಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ನೊಂದಾಯಿಸಲು ಸಂತೋಷ್ (9686664985), ನಳಿನಿ (9740182248) ಅವರನ್ನು ಸಂಪರ್ಕಿಸಬಹುದು.