ಒಂದು ಕಾಲದಲ್ಲಿ ವಿಶ್ವದ ನಂ.1 ಬೌಲರ್​ ಆಗಿದ್ದ ಈತ ಇಂದು ಮ್ಯಾನೇಜರ್​ ಆಗಿ ಕೆಲಸ! ಯಾರು ಗೊತ್ತೇ? | Manager

former cricketer
Published on

ನ್ಯೂಸೌತ್​ ವೇಲ್ಸ್​: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್​ ವೇಗಿ ಆಗಿ ಕಣಕ್ಕಿಳಿಯುತ್ತಿದ್ದ ಇವರು, ಎದುರಾಳಿ ಬ್ಯಾಟರ್​ಗಳಲ್ಲಿ ನಡುಕ ಹುಟ್ಟಿಸುತ್ತಿದ್ದರು. ವಿಶ್ವದ ನಂಬರ್ ಒನ್ ಬೌಲರ್ ಎಂದೇ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿದ್ದ ಈತ ಅಂದಿನ ಕಾಲದಲ್ಲಿ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್​ರನ್ನು ಬಹಳ ಕಾಡಿದ್ದರು.​ ವೀರು ಅವರಿಗೆ ಹೆಚ್ಚು ರನ್​ ಕಲೆಹಾಕದಂತೆ ತಮ್ಮ ಬೌಲಿಂಗ್​ನಿಂದ ಕಟ್ಟುಹಾಕುತ್ತಿದ್ದರು. 2008ರಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ಬೌಲರ್​ ಒಂದು ಬಲವಾದ ಕಾರಣದಿಂದ ಕ್ರಿಕೆಟ್​ಗೆ ಗುಡ್​ಬೈ ತಿಳಿಸಿ ಇಂದು ಅಕೌಂಟ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದ್ದೇ ಆದರೂ ಒಪ್ಪಿಕೊಳ್ಳುವ ಸಂಗತಿ. ಅಸಲಿಗೆ ಇವರು ಬೇರಾರೂ ಅಲ್ಲ ಅವರೇ ನಾಥನ್ ಬ್ರಾಕೆನ್ (Manager).

ಎಲ್ಲಾ ಫಾರ್ಮೆಟ್​ನಿಂದ ನಿವೃತ್ತಿ

ಅಂದು ಆಸ್ಟ್ರೇಲಿಯಾ ತಂಡಕ್ಕೆ ಅದ್ಭುತ ಶಕ್ತಿಯಾಗಿದ್ದ ನಾಥನ್ ಬ್ರಾಕೆನ್ 2001ರಿಂದ 2009 ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಂಗರೂ ಪಡೆ ಪ್ರತಿನಿಧಿಸಿದರು. 2003 ಮತ್ತು 2007ರಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ತಂಡದ ಗೆಲುವಿನ ಭಾಗವಾಗಿ ನಾಥನ್​ ಮಿಂಚಿದ್ದರು. ಎಡಗೈ ವೇಗಿ ಆಗಿ ಮೈದಾನಕ್ಕೆ ಬ್ರಾಕೆನ್​ ಅವರು ಎಂಟ್ರಿ ಕೊಡುತ್ತಿದ್ದರೆ ಕ್ರೀಸ್​ನಲ್ಲಿದ್ದ ಎದುರಾಳಿ ಬ್ಯಾಟರ್​ಗಳು ಒಂದು ನಿಮಿಷ ಹೇಗೆ ರನ್​ ಕಲೆ ಹಾಕೋದು ಎಂದು ಚಿಂತಿಸುತ್ತಿದ್ದರು. ದೀರ್ಘ ಮೊಣಕಾಲಿನ ಸಮಸ್ಯೆಯ ಕಾರಣ ಬ್ರಾಕನ್ 2011ರ ಜನವರಿಯಲ್ಲಿ ಕ್ರಿಕೆಟ್‌ನ ಎಲ್ಲಾ ಫಾರ್ಮೆಟ್​ನಿಂದ ನಿವೃತ್ತಿ ಘೋಷಿಸಿದರು.

ಅಕೌಂಟ್​ ಮ್ಯಾನೇಜರ್​ ಆಗಿ ಕೆಲಸ

8 ವರ್ಷದ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ನಾಥನ್​, 116 ಏಕದಿನ, 19 ಟಿ20 ಮತ್ತು 5 ಟೆಸ್ಟ್‌ ಪಂದ್ಯಗಳಲ್ಲಿ ಆಸೀಸ್ ಪಡೆಯನ್ನು ಪ್ರತಿನಿಧಿಸಿದ್ದು, ಒಟ್ಟು 205 ವಿಕೆಟ್​ಗಳು ಪಡೆದುಕೊಂಡಿದ್ದಾರೆ. ವರದಿಗಳ ಪ್ರಕಾರ, 2011ರಲ್ಲಿ ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಬ್ರಾಕನ್​ರನ್ನು 1.3 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದ್ರೆ, ಅವರು ತಮ್ಮ ಮೊಣಕಾಲಿನ ಸಮಸ್ಯೆಯಿಂದ ಆಡಲು ಇಚ್ಛಿಸದೆ, ದೊಡ್ಡ ಆಫರ್​ ಅನ್ನು ತಿರಸ್ಕರಿಸಿದರು. ಸದ್ಯ ಕ್ರಿಕೆಟ್ ಜಗತ್ತಿನಿಂದ ಬಹಳ ದೂರು ಉಳಿದಿರುವ ಬ್ರಾಕನ್​, ಪ್ರಸ್ತುತ ನ್ಯೂ ಸೌತ್ ವೇಲ್ಸ್‌ನ ಫುಲ್ಟನ್ ಹೊಗನ್ ಎಂಬ ಸಿವಿಲ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಅಕೌಂಟ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತ, ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net