

ಬರೋಡ: ಕಳೆದ 11 ತಿಂಗಳಿಂದ ನಿಂತ ನೀರಾಗಿದ್ದ ದೇಶೀಯ ಕ್ರಿಕೆಟ್‌ಗೆ ಭಾನುವಾರ ಚಾಲನೆ ಸಿಗುತ್ತಿದೆ. ದೇಶದ 6 ನಗರಗಳಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಆರಂಭಗೊಳ್ಳಲಿವೆ. 38 ತಂಡಗಳು ಕಣಕ್ಕಿಳಿಯುತ್ತಿವೆ. ಪ್ರಮುಖ ತಂಡಗಳಲ್ಲಿ ಒಂದಾದ ಬರೋಡ ಆರಂಭಕ್ಕೂ ಮುನ್ನವೇ ವಿವಾದದಿಂದ ಹೆಸರಾಗಿದೆ. ಬರೋಡ ತಂಡದ ನಾಯಕನಾಗಿರುವ ಕೃನಾಲ್ ಪಾಂಡ್ಯ, ಸಹ ಆಟಗಾರರ ಎದುರು ನಿಂದಿಸಿದರು ಎಂದು ಆರೋಪಿಸಿ ಅನುಭವಿ ಆಟಗಾರ ದೀಪಕ್ ಹೂಡಾ ತಂಡದಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಎಫ್ ಸಿ ತಂಡಕ್ಕೆ ಸತತ 4ನೇ ಸೋಲು,
ಬರೋಡ ತಂಡ ಟೂರ್ನಿ ಆರಂಭಕ್ಕೂ ಮುನ್ನವೇ ಹಿನ್ನಡೆ ಅನುಭವಿಸಿದೆ. ಬರೋಡದ ರಿಲಯೆನ್ಸ್ ಸ್ಟೇಡಿಯಂನಲ್ಲಿ ಅಭ್ಯಾಸದ ವೇಳೆ ದೀಪಕ್ ಹೂಡಾ ಹಾಗೂ ಕೃನಾಲ್ ನಡುವೆ ಜಟಾಪಟಿ ಏರ್ಪಟ್ಟಿದೆ. ಕೃನಾಲ್ ಪಾಂಡ್ಯ ವಿರುದ್ಧ ಬರೋಡ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ ಹೂಡಾ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಬರೋಡ ತಂಡ ಭಾನುವಾರ ಉತ್ತರಾಖಂಡ ತಂಡವನ್ನು ತನ್ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಕೃನಾಲ್ ಪಾಂಡ್ಯ ಹಾಗೂ ದೀಪಕ್ ಹೂಡಾ ನಡುವಿನ ಜಟಾಪಟಿಯನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಬರೋಡ ಕ್ರಿಕೆಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬರೋಡ ತಂಡದ ಪ್ರಮುಖ ಆಟಗಾರನಾಗಿರುವ ದೀಪಕ್ ಹೂಡಾ, 46 ಪ್ರಥಮ ದರ್ಜೆ, 68 ಲಿಸ್ಟ್ ಎ ಹಾಗೂ 123 ಟಿ20 ಪಂದ್ಯಗಳನ್ನಾಡಿದ್ದಾರೆ. ಬರೋಡ ಪರ ಈಗಾಗಲೇ ಯೂಸುಫ್ ಪಠಾಣ್ ಹಾಗೂ ಹಾರ್ದಿಕ್ ಪಾಂಡ್ಯ ಗೈರಾಗಿದ್ದು, ಇದೀಗ ಮತ್ತೋರ್ವ ಅನುಭವಿ ಆಟಗಾರನ ಸೇವೆಯನ್ನು ತಂಡ ಕಳೆದುಕೊಂಡಿದೆ. ದೀಪಕ್ ಹೂಡ 2020ರ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದರು.