

ಅಶೋಕ್ ಉಪ್ಪಾರ ಹಗರಿಬೊಮ್ಮನಹಳ್ಳಿ
ಸುಸಜ್ಜಿತ ತಾಲೂಕು ಕ್ರೀಡಾಂಗಣ ನಿರ್ಮಾಣ ಈ ಭಾಗದವರ ಬಹುವರ್ಷದ ಬೇಡಿಕೆಯಾಗಿದ್ದು, ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿವೇಶನದಲ್ಲಿ 2020-21ನೇ ಸಾಲಿನ ಜಿಲ್ಲಾ ಖನಿಜ ನಿಧಿ ಅನುದಾನದಡಿ ಲೋಕೊಪಯೋಗಿ ಇಲಾಖೆ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯನ್ನು ನಡೆಸುತ್ತಿದೆ.
ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣದಲ್ಲಿ 200 ಮೀಟರ್ ರನ್ನಿಂಗ್ ಟ್ರಾೃಕ್, ಪೆವಿಲಿಯನ್, ಪ್ರೇಕ್ಷಕರ ಗ್ಯಾಲರಿ, ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ಜಿಮ್ ರೂಮ್, ಪ್ರತ್ಯೇಕ ಡಾರ್ಮೆಟರಿ ರೂಂ, ಪ್ರತ್ಯೇಕ ಶೌಚಗೃಹಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಯಾವುದೇ ಒಳಾಂಗಣ ಕ್ರೀಡೆಗಳಿಗೆ ಆವರಣದಲ್ಲಿ ಅವಕಾಶ ನೀಡಿಲ್ಲ. ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಪುರಸಭೆ ಆಡಳಿತದಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 40 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಒಂಬತ್ತು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ, ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗುವುದು ಎನ್ನುತ್ತಾರೆ ಪಿಡಬ್ಲುೃಡಿ ಎಇಇ ಪುರುಷೋತ್ತಮ.
ಗಂಗಾವತಿ ಭೀಮಪ್ಪ ಕೊಟ್ಟ ದಾನ.
ಇದನ್ನೂ ಓದಿ: VIDEO| ಮಕ್ಕಳ ಬೌಲಿಂಗ್ಗೆ ಮಾರು ಹೋದ ಮಾಜಿ ವೇಗಿ
ಗಂಗಾವತಿ ಕುಟುಂಬದವರು ಶೈಕ್ಷಣಿಕ ಉದ್ದೇಶಕ್ಕಾಗಿ 60ರ ದಶಕದಲ್ಲಿ 19.9 ಎಕರೆ ಭೂಮಿ ದಾನ ನೀಡಿದ್ದರು. ಇದೇ ಆವರಣದಲ್ಲಿ ಸರ್ಕಾರಿ ಪ್ರೌಢಶಾಲೆಗೆ 7.5 ಎಕರೆ, ಪಿಯುಸಿ ಕಾಲೇಜುಗೆ 4.21 ಎಕರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 6.20 ಎಕರೆ ಪ್ರತ್ಯೇಕ ನಿವೇಶನಗಳಿವೆ. ಉಳಿದ ಭೂಮಿ ಎಲ್ಲ ವಿದ್ಯಾರ್ಥಿಗಳಿಗೆ ಆಟದ ಮೈದಾನವಾಗಿ ಬಳಕೆಯಾಗುತ್ತಿದೆ.
ಜೂನಿಯರ್ ಕಾಲೇಜಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರೌಢಶಾಲೆ, ಪಿಯುಸಿ, ಡಿಗ್ರಿ ಕಾಲೇಜು ಸೇರಿ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕಾಲೇಜು ಮೈದಾನದಲ್ಲೇ ಆಟವಾಡಲು ತಾಲೂಕು ಕ್ರೀಡಾಂಗಣದ ಪರವಾನಗಿ ಪಡೆದು ಆಡಬೇಕಾಗುವ ಅನಿವಾರ್ಯತೆ ಎದುರಾಗಲಿದೆ. ಕ್ರೀಡಾಂಗಣ ಬಳಕೆಗೆ ಸೇವಾ ಶುಲ್ಕ ಪಾವತಿಸಬೇಕಾಗುತ್ತದೆ. ತಾಲೂಕಾಡಳಿತ, ಶಿಕ್ಷಣ ಇಲಾಖೆ ಕ್ರೀಡಾಕೂಟಗಳು, ತಾಲೂಕು ಮಟ್ಟದ ಉತ್ಸವಗಳು, ರಾಜಕೀಯ ಪಕ್ಷಗಳ ಸಭೆ-ಸಮಾರಂಭ-ಸಮಾವೇಶ ಇಲ್ಲೇ ನಡೆಯಲಿರುವ ಕಾರಣ ತರಗತಿ ಸಮಯದಲ್ಲಿ ತೊಂದರೆಯಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ವಾಯುವಿಹಾರ, ವಾಕಿಂಗ್, ಜಾಗಿಂಗ್ಗಾಗಿ ಜನ ಈ ಮೈದಾನಕ್ಕೆ ಬರುತ್ತಾರೆ. ಕ್ರಿಕೆಟ್, ಫುಟ್ಬಾಲ್, ಕಬ್ಬಡಿ ಆಡಲು ಕ್ರೀಡಾಪಟುಗಳೂ ಇಲ್ಲಿಗೆ ಬರುತ್ತಾರೆ. ಇತ್ತೀಚೆಗೆ ಪುರಸಭೆಯವರು ಮೈದಾನದಿಂದ ಕೂಗಳತೆ ದೂರದಲ್ಲಿ ತಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದಾಗಿ ದುರ್ವಾಸನೆ ಹೆಚ್ಚಾಗಿದೆ. ಅಲ್ಲದೇ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದರಿಂದ ಹೊಗೆ ಉಂಟಾಗಿ ಗಾಳಿ ಕಲುಷಿತಗೊಳ್ಳುತ್ತಿದೆ. ಇಂತಹ ಗಾಳಿ ಸೇವನೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ವಾಯು ವಿಹಾರಿಗಳು ಬರುವುದನ್ನು ನಿಲ್ಲಿಸುತ್ತಿದ್ದಾರೆ.
ತುಂಗಭದ್ರಾ ನದಿ ಅಣೆಕಟ್ಟು ನಿರ್ಮಾಣದ ವೇಳೆ ನಾರಾಯಣದೇವರಕೆರೆ ಗ್ರಾಮ ಮುಳುಗಡೆಯಾಗುವ ಕಾರಣ ಅಲ್ಲಿನ ನಿವಾಸಿಗಳಿಗೆ ಹಬೊಹಳ್ಳಿಯ ರಾಮನಗರ ಕಾಲನಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಇವರು ಬಹುತೇಕ ರೈರು. ಇವರ ಮಕ್ಕಳ ಶಿಕ್ಷಣಕ್ಕಾಗಿ ಗಂಗಾವತಿ ಭೀಮಪ್ಪನವರು 19.90 ಎಕರೆ ಸ್ವಂತ ಭೂಮಿ ದಾನ ನೀಡಿದ್ದರು. ನಂತರ ಅಧಿಕಾರಕ್ಕೆ ಬಂದ ಶಾಸಕರು ತಂತಮ್ಮ ಅವಧಿಯಲ್ಲಿ ಈ ಮೈದಾನದ ಜಾಗವನ್ನು ಇತರೆ ಇಲಾಖೆಗಳಿಗೆ ನೀಡುತ್ತ ಬಂದರು ಎಂಬ ಆರೋಪಗಳಿವೆ.
ಮಾಜಿ ಶಾಸಕ ಸಿರಾಜ್ಶೇಖ್ ಕೊಟ್ಟೂರು, ಕೂಡ್ಲಿಗಿ, ಹಬೊಹಳ್ಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಶುದ್ಧಿಕರಣ ಘಟಕ ನಿರ್ಮಿಸಲು ಎರಡು ಎಕರೆ ಭೂಮಿಯನ್ನು ನಗರ ನೀರು ಸರಬರಾಜು ಇಲಾಖೆಗೆ ವರ್ಗಾಯಿಸಿದ್ದರು. ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಅವಧಿಯಲ್ಲಿ 6.19 ಎಕರೆ ಭೂಮಿಯನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ವರ್ಗಾಯಿಸಿದ್ದರು. ಈಗಿನ ಶಾಸಕ ಎಸ್.ಭೀಮಾನಾಯ್ಕ ಇಲ್ಲೇ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡಿಸುತ್ತಿದ್ದಾರೆ.
ಶಾಲಾ ಮೈದಾನದಲ್ಲಿ ತಾಲೂಕು ಕ್ರೀಗಾಂಗಣ ನಿರ್ಮಿಸುವ ಬದಲು ಬೇರೆ ಕಡೆ ಪ್ರತ್ಯೇಕವಾಗಿ ನಿರ್ಮಿಸುವಂತೆ ಒತ್ತಾಯಿಸಿ ಅನೇಕ ಬಾರಿ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಯುವಕರು ಪ್ರತಿಭಟನೆ ನಡೆಸಿದ್ದರು. ಅದ್ಯಾವುದನ್ನು ಪರಿಗಣಿಸದ ಶಾಸಕರು ಅಲ್ಲೇ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ದಾನಿಗಳ ಕುಟುಂಬ ಸೇರಿ ಸ್ಥಳೀಯ ಕ್ರೀಡಾಪಟುಗಳಿಗೆ ಬೇಸರ ಮೂಡಿಸಿದೆ.
ಗಂಗಾವತಿ ಭೀಮಪ್ಪನವರ ಸರ್ಕಾರಿ ಪಿಯು ಕಾಲೇಜು ಆಟದ ಮೈದಾನದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ಸಂಪೂರ್ಣ ಅವೈಜ್ಞಾನಿಕ. ಪ್ರತ್ಯೇಕ ನಿವೇಶನದಲ್ಲಿ ಎಲ್ಲ ಕ್ರೀಡೆಗಳನ್ನೊಳಗೊಂಡ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಬೇಕಿತ್ತು. ಜನಪ್ರತಿನಿಧಿಗಳು ಸರ್ಕಾರದ ಅನುದಾನ ಬಳಸಿಕೊಳ್ಳಲು ಖಾಲಿ ಇರುವ ಮೈದಾನದಲ್ಲಿ ಗೋಡೆಗಳನ್ನು ನಿರ್ಮಿಸಿದಂತಾಗುತ್ತದೆ ಹೊರತು ಕ್ರೀಡಾಪಟುಗಳಿಗೆ ಪ್ರಯೋಜನವಾಗುವುದಿಲ್ಲ.ಸುಭಾಷ್ ಮುತ್ಕೂರು, ಹಗರಿಬೊಮ್ಮನಹಳ್ಳಿಯ ಸ್ಪೋರ್ಟ್ಸ್ ಕೋಚ್ ಜಿಲ್ಲಾ ಖನಿಜ ನಿಧಿಯಿಂದ ನಾಲ್ಕು ಕೋಟಿ ರೂ. ವೆಚ್ಚದಲ್ಲಿ 1.10 ಎಕರೆ ಖಾಲಿ ನಿವೇಶನದಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಲಾಗುವುದು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. 9 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗುವುದು.ಪುರುಷೋತ್ತಮ, ಹಬೊಹಳ್ಳಿ ಪಿಡಬ್ಲುೃಡಿ ಎಇಇ