

ಕೊಲಂಬೊ: ಮುಂಬರುವ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಗೆ ಆತಿಥ್ಯ ವಹಿಸಲು ಶ್ರೀಲಂಕಾ ಆಸಕ್ತಿ ತೋರಿದೆ. ಶ್ರೀಲಂಕಾದಲ್ಲಿ ಕಬಡ್ಡಿಗೆ ಉತ್ತೇಜನ ಸಿಗುವ ದೃಷ್ಟಿಯಿಂದ 8ನೇ ಆವೃತ್ತಿಯ ಪಿಕೆಎಲ್ಗೆ ಆತಿಥ್ಯ ವಹಿಸಿಕೊಳ್ಳಲು ಸಿದ್ಧವಿರುವುದಾಗಿ ಶ್ರೀಲಂಕಾ ಕಬಡ್ಡಿ ಸಂಸ್ಥೆ ಅಧ್ಯಕ್ಷ ಅನುರಾ ಪಥಿರಾಣಾ ಹೇಳಿದ್ದಾರೆ.
ಕರೊನಾ ಭೀತಿ ಯಿಂದಾಗಿ ಜಾಗತಿಕ ಕ್ರೀಡಾ ಲೋಕವೇ ಸ್ತಬ್ಧಗೊಂಡಿದೆ. ಇದರಿಂದಾಗಿ ಭಾರತೀಯ ಕ್ರೀಡಾ ಲೀಗ್ಗಳೂ ತೂಗುಯ್ಯಾಲೆಯಲ್ಲಿವೆ. ಈಗಾಗಲೇ 13ನೇ ಆವೃತ್ತಿಯ ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದ್ದು, 8ನೇ ಪಿಕೆಎಲ್ ಕೂಡ ಅನಿಶ್ಚಿತತೆಯಲ್ಲಿದೆ. ಪೂರ್ವ ನಿಗದಿಯಂತೆ ಏಪ್ರಿಲ್ನಲ್ಲಿ ಕಬಡ್ಡಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು, ಜುಲೈ ತಿಂಗಳಲ್ಲಿ 8ನೇ ಆವೃತ್ತಿಗೆ ಚಾಲನೆ ಸಿಗಬೇಕಿತ್ತು. ಇದೀಗ ಅಕ್ಟೋಬರ್- ನವೆಂಬರ್ ತಿಂಗಳಲ್ಲಿ ಪಿಕೆಎಲ್ ಆಯೋಜಿಸಲು ಶ್ರೀಲಂಕಾ ಆಸಕ್ತಿ ವಹಿಸಿದೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಪ್ರೊ ಕಬಡ್ಡಿ ಲೀಗ್ ಸಂಘಟಕರು, ಶ್ರೀಲಂಕಾದಲ್ಲಿ ಟೂರ್ನಿ ಆಯೋಜಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. 2014ರಲ್ಲಿ ಆರಂಭಗೊಂಡ ಪಿಕೆಎಲ್ ಶ್ರೀಲಂಕಾದಲ್ಲೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 2019ರಲ್ಲಿ ನಡೆದ ದಕ್ಷಿಣ ಏಷ್ಯಾ ಗೇಮ್ಸ್ನಲ್ಲಿ ಶ್ರೀಲಂಕಾ ಕಬಡ್ಡಿ ತಂಡ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಭಾರತದ ಎದುರು ಸೋತರೂ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಸಾಧನೆ ಮಾಡಿತ್ತು. ಜತೆಗೆ ಶ್ರೀಲಂಕಾದ ರಣಿಂದು ಚಾಮರ (ಯುಪಿ ಯೋಧಾ) ಹಾಗೂ ಮಿಲಿಂದಾ ಚತುರಂಗ (ಜೈಪುರ ಪಿಂಕ್ಪ್ಯಾಂಥರ್ಸ್) ಕಳೆದ ಲೀಗ್ನಲ್ಲಿ ಆಡಿದ್ದರು. -ಏಜೆನ್ಸೀಸ್