ನಾಯಕಿ​ ಹರ್ಮನ್​ಪ್ರೀತ್​​ ಮಾಡಿದ ಆ ಒಂದು ಮಿಸ್ಟೇಕ್​ನಿಂದ ಭಾರತಕ್ಕೆ ಏಷ್ಯಾಕಪ್​ ಮಿಸ್ ಆಯ್ತು!

Harmanpreet Kaur
Published on

ನವದೆಹಲಿ: ಶ್ರೀಲಂಕಾ ಪ್ರವಾಸದಲ್ಲಿ ಟೀಮ್​ ಇಂಡಿಯಾ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಮೂರು ಟಿ20 ಸರಣಿಯ ಭಾಗವಾಗಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಆದರೆ, ಮತ್ತೊಂದೆಡೆ ಭಾರತದ ಮಹಿಳಾ ತಂಡ ಶ್ರೀಲಂಕಾ ವಿರುದ್ಧ ಹೀನಾಯವಾಗಿ ಸೋತಿದೆ. ಅದೂ ಕೂಡ 2024ರ ಏಷ್ಯಾಕಪ್ ಫೈನಲ್‌ನಲ್ಲಿ. ಈ ಎರಡೂ ಪಂದ್ಯಗಳು ಒಂದೇ ದಿನ ನಡೆದಿದ್ದವು.

ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆದ ಮೊದಲ ಮಹಿಳಾ ಏಷ್ಯಾ ಕಪ್ 2024 ಫೈನಲ್‌ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಮುಖಾಮುಖಿಯಾದವು. ಸಂಜೆ ಭಾರತ-ಶ್ರೀಲಂಕಾ ಪುರುಷರ ತಂಡಗಳು ಟಿ20 ಸರಣಿಯ ಅಂಗವಾಗಿ ಪೈಪೋಟಿ ನಡೆಸಿದವು. ಮಹಿಳಾ ಕ್ರಿಕೆಟ್‌ನಲ್ಲಿ ಶ್ರೀಲಂಕಾ ಗೆದ್ದರೆ, ಪುರುಷರ ಕ್ರಿಕೆಟ್‌ನಲ್ಲಿ ಟೀಮ್​ ಇಂಡಿಯಾ ಗೆಲುವು ಸಾಧಿಸಿತು.

2024ರ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ ಟೀಮ್​ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಮಾಡಿದ ಆ ಒಂದು ತಪ್ಪಿನಿಂದಾಗಿ ಏಷ್ಯಾಕಪ್ ಕೈತಪ್ಪಿತು. 166 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಶ್ರೀಲಂಕಾ 15 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿತು. ಹರ್ಷಿತಾ ಮಾಧವಿ 45 ಹಾಗೂ ಕವಿಶಾ ದಿಲ್ಹಾರಿ 12 ರನ್ ಗಳಿಸಿ, ಕ್ರೀಸ್‌ನಲ್ಲಿದ್ದರು. ಉತ್ತಮ ಹೊಡೆತಗಳ ಮೂಲಕ ಚೆನ್ನಾಗಿ ಆಡುತ್ತಿದ್ದ ಹರ್ಷಿತಾ, ದೀಪ್ತಿ ಶರ್ಮಾ ಎಸೆದ ಇನಿಂಗ್ಸ್‌ನ 16ನೇ ಓವರ್‌ನ ಮೂರನೇ ಎಸೆತದಲ್ಲಿ ಟೀಮ್​ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್​ಗೆ ಕ್ಯಾಚ್​ ನೀಡಿದರು. ಆದರೆ, ತುಂಬಾ ಸುಲಭವಾದ ಕ್ಯಾಚ್​​ ಅನ್ನು ಕೌರ್​ ಕೈಚೆಲ್ಲಿದರು. ಒಂದು ವೇಳೆ ಈ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು.

ಜೀವದಾನ ಪಡೆದ ಹರ್ಷಿತಾ, ತಮ್ಮ ಬ್ಯಾಟಿಂಗ್​ ಮೂಲಕ ಇನ್ನಷ್ಟು ಅಬ್ಬರಿಸಿ, ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಶ್ರೀಲಂಕಾ ಮೊದಲ ಬಾರಿಗೆ ಏಷ್ಯಾಕಪ್ ಗೆದ್ದುಕೊಂಡಿತು. ಭಾರತ ಈಗಾಗಲೇ ಏಳು ಏಷ್ಯಾಕಪ್‌ಗಳನ್ನು ಗೆದ್ದಿದೆ. ಹರ್ಮನ್‌ಫ್ರಿತ್ ಕೌರ್ ಮಿಸ್​ ಮಾಡಿದ ಆ ಒಂದು ಕ್ಯಾಚ್‌ನಿಂದ 8ನೇ ಕಪ್ ಎತ್ತಿಹಿಡಿಯುವ ಅವಕಾಶ ಮಿಸ್​ ಆಗಿದೆ.

ಪಂದ್ಯ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ 60 ರನ್, ವಿಕೆಟ್ ಕೀಪರ್ ರಿಚಾ ಘೋಷ್ 30 ರನ್ ಮತ್ತು ಜೆಮಿಯಾ 29 ರನ್ ಗಳಿಸಿದರು. 166 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 18.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ನಾಯಕ ಚರಿತ ಅಟಪಟ್ಟು 61, ಹರ್ಷಿತಾ 69 ಮತ್ತು ಕವಿಶಾ 30 ರನ್ ಗಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net