

Abhishek sharma : ನಿನ್ನೆ (ಏಪ್ರಿಲ್ 12) ರಾತ್ರಿ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿ ಬೊಬ್ಬರಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರು. ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದ ಅಭಿಶೇಕ್, ಒಟ್ಟು 55 ಎಸೆತಗಳನ್ನು ಎದುರಿಸಿ 14 ಬೌಂಡರಿ ಮತ್ತು 10 ಸಿಕ್ಸರ್ಗಳ ಸಹಾಯದಿಂದ 141 ರನ್ ಗಳಿಸಿ ಐಪಿಎಲ್ನಲ್ಲಿ ತಮ್ಮ ಹೆಸರಿಗೆ ದಾಖಲೆಯೊಂದನ್ನು ಸೇರಿಸಿಕೊಂಡರು.
ಶತಕ ಗಳಿಸಿದ ನಂತರ, ಅಭಿಷೇಕ್ ಶರ್ಮ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಅಭಿಷೇಕ್ ಅವರು ತಮ್ಮ ಜೇಬಿನಿಂದ ಒಂದು ಕಾಗದವನ್ನು ತೆಗೆದು, ಅದನ್ನು ಎಲ್ಲರಿಗೂ ಪ್ರದರ್ಶಿಸಿದರು. ಕಾಗದದ ಮೇಲೆ ಇದು ಆರೆಂಜ್ ಆರ್ಮಿಗಾಗಿ ಎಂದು ಬರೆಯಲಾಗಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಷೇಕ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಎಸ್ಆರ್ಎಚ್ ತಂಡ ಸತತ ಪಂದ್ಯಗಳನ್ನು ಸೋತಿದ್ದರಿಂದ ಈ ಪಂದ್ಯಕ್ಕೂ ಮುನ್ನವೇ ಅಭಿಷೇಕ್ ಒಂದು ಟಿಪ್ಪಣಿ ಬರೆದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನಿಜವಾದ ಸತ್ಯವನ್ನು ಹೈದರಾಬಾದ್ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಬಹಿರಂಗಪಡಿಸಿದ್ದಾರೆ. ಕಳೆದ 6 ಪಂದ್ಯಗಳಿಂದಲೂ ಆ ಪತ್ರ ಅವರ ಜೇಬಿನಲ್ಲಿದೆ ಎಂದು ಹೆಡ್ ಹೇಳಿದರು. ದೇವರ ದಯೆಯಿಂದ, ಪಂಜಾಬ್ ವಿರುದ್ಧದ ಪಂದ್ಯದ ನಂತರ ಅದು ಹೊರಬಂದಿದೆ ಎಂದರು.
ಅದೇನೆಂದರೆ, ಅಭಿಷೇಕ್ ಶರ್ಮ ಐಪಿಎಲ್ ಆರಂಭಕ್ಕೂ ಮುನ್ನವೇ ಪತ್ರ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಆದರೆ, ಕಳೆದ 5 ಪಂದ್ಯಗಳಲ್ಲಿ ಅವರು ಸರಿಯಾಗಿ ಪ್ರದರ್ಶನ ನೀಡಿಲ್ಲ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಅವರು ಆ ಪತ್ರವನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 245 ರನ್ ಗಳಿಸಿತು. ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ (82 ರನ್ 36 ಎಸೆತ, 6 ಬೌಂಡರಿ, 6 ಸಿಕ್ಸರ್), ಪ್ರಿಯಾಂಶ್ ಆರ್ಯ (36 ರನ್, 13 ಎಸೆತ, 2 ಬೌಂಡರಿ, 4 ಸಿಕ್ಸರ್) ಪ್ರಭ್ ಸಿಮ್ರಾನ್ ಸಿಂಗ್ (42 ರನ್ 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಮಾರ್ಕ್ ಸ್ಟೊಯಿನಿಸ್ (ಔಟಾಗದೆ 34 ರನ್, 11 ಎಸೆತ, 1 ಬೌಂಡರಿ, 4 ಸಿಕ್ಸರ್) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ತಂಡವು ಬೃಹತ್ ಮೊತ್ತವನ್ನು ಕಲೆಹಾಕಿತು. ಎಸ್ಆರ್ಎಚ್ ಬೌಲರ್ಗಳಲ್ಲಿ ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರೆ, ಇಶಾನ್ ಮಾಲಿಂಗ ಎರಡು ವಿಕೆಟ್ ಪಡೆದರು.
ಬಳಿಕ ಪಂಜಾಬ್ ನೀಡಿದ ಗುರಿ ಬೆನ್ನತ್ತಿದ ಎಸ್ಆರ್ಎಚ್ ಪರ ಅಭಿಷೇಕ್ ಶರ್ಮಾ (141 ರನ್, 55 ಎಸೆತ, 14 ಬೌಂಡರಿ, 10 ಸಿಕ್ಸರ್) ವಿಧ್ವಂಸಕ ಶತಕ ಗಳಿಸಿದರು. ಟ್ರಾವಿಸ್ ಹೆಡ್ (66 ರನ್, 37 ಎಸೆತ, 9 ಬೌಂಡರಿ, 3 ಸಿಕ್ಸರ್) ನೆರವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ 18.3 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಸತತ ಸೋಲುಗಳಿಂದ ಕಂಗೆಟ್ಟಿದ ಎಸ್ಆರ್ಎಚ್ ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. (ಏಜೆನ್ಸೀಸ್)