

SRH vs DC: ಇಂದು (ಮೇ.05) ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಎಸ್ಆರ್ಎಚ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ಟಾಸ್ ಗೆದ್ದು ಬುದ್ಧಿವಂತಿಕೆ ಪ್ರದರ್ಶಿಸಿದ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್, ನಾವು ಮೊದಲು ಬೌಲಿಂಗ್ ಮಾಡುತ್ತೇವೆ ಎಂದು ಡಿಸಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಅಕ್ಸರ್ ಪಟೇಲ್ ಪಡೆ, ಆರಂಭಿಕ ಹಂತದಲ್ಲೇ ದೊಡ್ಡ ಆಘಾತಕ್ಕೆ ಸಿಲುಕಿತು. ಪವರ್ಪ್ಲೇ ಅಂತ್ಯದೊಳಗೆ 5 ವಿಕೆಟ್ ಕಳೆದುಕೊಂಡ ಡಿಸಿ ಬ್ಯಾಟರ್ಸ್, ತಂಡದ ಮೊತ್ತ ಹೆಚ್ಚಿಸಲು ತೀರ ಹೆಣಗಾಡಿದರು.
ಪ್ಯಾಟ್ ಕಮ್ಮಿನ್ಸ್ ಅವರ ಮೊದಲ ಬಾಲ್ಗೆ ವಿಕೆಟ್ ಒಪ್ಪಿಸಿದ ಆರಂಭಿಕ ಬ್ಯಾಟರ್ ಕರುಣ್ ನಾಯರ್, ಡಕ್ಔಟ್ ಆಗಿ ಪೆವಿಲಿಯನ್ ಸೇರಿದರು. ಅವರ ಬೆನ್ನಲ್ಲೇ ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆ.ಎಲ್. ರಾಹುಲ್, ಅಕ್ಸರ್ ಪಟೇಲ್ ಕೂಡ ಒಂದಂಕಿಗೆ ಪೆವಿಲಿಯನ್ಗೆ ಮರಳಿದರು. ಅಬ್ಬರಿಸಬೇಕಿದ್ದ ಬ್ಯಾಟರ್ಗಳೇ ವಿಫಲವಾಗಿದ್ದು, ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿತು. ಒಟ್ಟು ಮೂರು ಬಹುಮುಖ್ಯ ವಿಕೆಟ್ ಕಬಳಿಸಿದ ಕಮ್ಮಿನ್ಸ್, ತಂಡದ ಪರ ಮಿಂಚಿದರು.
20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್, 133 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿಯನ್ನು ಎಸ್ಆರ್ಎಚ್ ಸುಲಭವಾಗಿ ತಲುಪಲಿದೆಯೇ ಅಥವಾ ಡೆಲ್ಲಿಯಂತೆ ಪರದಾಡಲಿದೆಯೇ? ಎಂಬುದನ್ನು ಎರಡನೇ ಇನ್ನಿಂಗ್ಸ್ನಲ್ಲಿ ತಿಳಿಯಬೇಕಿದೆ.