

ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಭಾರತ ತಂಡದ ಮಾಜಿ ವೇಗದ ಬೌಲರ್ ಎಸ್. ಶ್ರೀಶಾಂತ್ ಅವರ ನಿಷೇಧ ಮುಕ್ತಾಯಕ್ಕೆ ದಿನಗಣನೆ ಆರಂಭಗೊಂಡಿದೆ. ಸೆಪ್ಟೆಂಬರ್ 13ರಂದು ಶ್ರೀಶಾಂತ್ ಅವರ ನಿಷೇಧ ಮುಗಿಯಲಿದ್ದು, ಮರಳಿ ಕಣಕ್ಕಿಳಿಯುವ ಧ್ಯೇಯದೊಂದಿಗೆ ಅವರು ಈಗಾಗಲೆ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿದ್ದಾರೆ.
2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಭಾಗವಾಗಿದ್ದ ಶ್ರೀಶಾಂತ್, ಕರೊನಾ ವೈರಸ್ನಿಂದ ಕೆಲಕಾಲ ಪಡೆದಿದ್ದ ಪಡೆದಿದ್ದ ಬಿಡುವಿನ ಬಳಿಕ ಕೇರಳದ ಕ್ರಿಕೆಟ್ ಕ್ಲಬ್ ಒಂದರ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
37 ವರ್ಷದ ಶ್ರೀಶಾಂತ್ ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೇರಳ ಪರ ರಣಜಿ ಟ್ರೋಫಿಯಲ್ಲಿ ಆಡುವ ಹಂಬಲವನ್ನೂ ಹೊಂದಿದ್ದು, ಮುಂದಿನ ವರ್ಷದ ಐಪಿಎಲ್ನಲ್ಲಿ ಕಣಕ್ಕಿಳಿಯುವ ಯೋಜನೆಯನ್ನೂ ಹೊಂದಿದ್ದಾರೆ. ಶ್ರೀಶಾಂತ್ ಫಿಟ್ನೆಸ್ ಮತ್ತು ಫಾರ್ಮ್ ಸಾಬೀತು ಪಡಿಸಿದರೆ ಆಡುವ ಅವಕಾಶ ನೀಡಲಾಗುವುದು ಎಂದು ಕೇರಳ ರಣಜಿ ತಂಡದ ಕೋಚ್ ಟಿನು ಯಹೋನನ್ ಈಗಾಗಲೆ ಘೋಷಿಸಿದ್ದಾರೆ.
'ನೆಟ್ಸ್ಗೆ ಮರಳಿರುವೆ. ಇದು ನಿಜಕ್ಕೂ ಅತ್ಯುತ್ತಮ ಅನುಭವ. ಸ್ಪೈಕ್ಸ್ ಧರಿಸಿ ಓಡುವುದೇ ಖುಷಿ' ಎಂದು ಶ್ರೀಶಾಂತ್ ಬೌಲಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರ ಸ್ವಿಂಗ್ ಬೌಲಿಂಗ್ ಲಯ ಇನ್ನೂ ಉಳಿದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮೊದಲಿಗೆ ಶ್ರೀಶಾಂತ್ ಅವರಿಗೆ ಆಜೀವ ನಿಷೇಧ ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿಸಿಕೊಂಡಿದ್ದರು. 2019ರ ಆಗಸ್ಟ್ನಲ್ಲಿ ಬಿಸಿಸಿಐ ಅವರ ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಸಿತ್ತು. ಶ್ರೀಶಾಂತ್ ಭಾರತ ತಂಡದ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್ ಕಬಳಿಸಿದ್ದಾರೆ.