ಕ್ರೀಡಾ ಪತ್ರಕರ್ತರಿಗೆ ಕ್ರೀಡಾತಾರೆಯರಿಂದ ಸಲಾಂ

911602-world-sports-journalists-day
Published on

ಬೆಂಗಳೂರು: ಗುರುವಾರ ಅಂತಾರಾಷ್ಟ್ರೀಯ ಕ್ರೀಡಾ ಪತ್ರಕರ್ತರ ದಿನ. ಕ್ರೀಡಾಪಟುಗಳು ಮತ್ತು ಕ್ರೀಡಾ ಅಭಿಮಾನಿಗಳ ನಡುವೆ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸುವವರು ಕ್ರೀಡಾ ಪತ್ರಕರ್ತರು. ಈ ಹಿನ್ನೆಲೆಯಲ್ಲಿ ಭಾರತದ ಕ್ರೀಡಾತಾರೆಯರು ಕ್ರೀಡಾ ಪತ್ರಕರ್ತರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್​ ತೆಂಡುಲ್ಕರ್​, ಹರ್ಭಜನ್ ಸಿಂಗ್, ಸುರೇಶ್ ರೈನಾ, ಮಾಜಿ ಅಥ್ಲೀಟ್​ ಪಿಟಿ ಉಷಾ, ಅಥ್ಲೀಟ್​ ಹಿಮಾ ದಾಸ್ ಸಹಿತ ಹಲವು ಕ್ರೀಡಾತಾರೆಯರು, ಕ್ರೀಡಾಪಟುಗಳ ವೃತ್ತಿಜೀವನದ ಬೆಳವಣಿಗೆಯಲ್ಲಿ ಮತ್ತು ಕ್ರೀಡೆಗೆ ಕ್ರೀಡಾ ಪರ್ತಕರ್ತರು ನೀಡಿರುವ ಕೊಡುಗೆಯನ್ನು ನೆನೆದಿದ್ದಾರೆ.

'ನನಗೆ ಮತ್ತು ಇತರ ಎಲ್ಲ ಕ್ರೀಡಾಪಟುಗಳಿಗೆ ನೀವು ನೀಡುತ್ತ ಬಂದಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳು. ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನೀವು ಮತ್ತೆ ವರದಿ ಮಾಡುವ ದಿನಗಳು ಶೀಘ್ರದಲ್ಲೇ ಬರಲಿ. ಹ್ಯಾಮಿ ವರ್ಲ್ಡ್​ ಸ್ಪೋರ್ಟ್ಸ್ ಜರ್ನಲಿಸ್ಟ್ಸ್​ ಡೇ' ಎಂದು ಸಚಿನ್​ ತೆಂಡುಲ್ಕರ್​ ಟ್ವೀಟಿಸಿದ್ದಾರೆ. ‘ನಮ್ಮ ಜೀವನದ ಕಥೆಗಳನ್ನು ಎಲ್ಲರಿಗೂ ತಲುಪಿಸುವ ಕ್ರೀಡಾ ಬರಹಗಾರರಿಗೆ ಸೆಲ್ಯೂಟ್. ನನ್ನ ಕ್ರಿಕೆಟ್ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಎಲ್ಲ ಕ್ರೀಡಾ ಪತ್ರಕರ್ತರಿಗೆ ಕೃತಜ್ಞನಾಗಿದ್ದೇನೆ’ ಎಂದು ಹರ್ಭಜನ್ ಸಿಂಗ್ ಗುರುವಾರ ಟ್ವೀಟಿಸಿದ್ದಾರೆ. ಪಿಟಿ ಉಷಾ ಕೂಡ ವಿಡಿಯೋ ಸಂದೇಶದ ಮೂಲಕ ಕ್ರೀಡಾ ಪತ್ರಕರ್ತರಿಗೆ ಶುಭಾಶಯ ತಿಳಿಸಿದ್ದಾರೆ. ಕ್ರೀಡಾ ಪತ್ರಕರ್ತರಿಗೆ ಅಭಿನಂದನೆಗಳು ಎಂದು ಹಿಮಾದಾಸ್ ಕೂಡ ಟ್ವೀಟಿಸಿದ್ದಾರೆ. ಹಾಕಿ ಇಂಡಿಯಾ ಕೂಡ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಎಲ್ಲ ಕ್ರೀಡಾ ಪತ್ರಕರ್ತರಿಗೆ ಅಭಿನಂದನೆ ಹೇಳಿದೆ. ಐಸಿಸಿ ಕೂಡ ಕ್ರಿಕೆಟ್​ಗೆ ಪತ್ರಕರ್ತರು ನೀಡಿರುವ ಕೊಡುಗೆಗಳಿಗೆ ಅಭಿನಂದನೆ ಸಲ್ಲಿಸಿದೆ.

ಪ್ರತಿ ವರ್ಷ ಜುಲೈ 2ರಂದು ಅಂತಾರಾಷ್ಟ್ರೀಯ ಕ್ರೀಡಾ ಪತ್ರಕರ್ತರ ದಿನ ಆಚರಿಸಲಾಗುತ್ತದೆ. 1924ರ ಪ್ಯಾರಿಸ್ ಒಲಿಂಪಿಕ್ಸ್ ವೇಳೆ ಅಂತಾರಾಷ್ಟ್ರೀಯ ಕ್ರೀಡಾ ಪತ್ರಕರ್ತರ ಸಂಸ್ಥೆ (ಎಐಪಿಎಸ್) ಸ್ಥಾಪನೆಯಾದ ದಿನವೂ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net