ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಉಡುಪಿ ಮೂಲದ ಚಿರಾಗ್ ಶೆಟ್ಟಿಗೆ ಖೇಲ್​ರತ್ನ ಗೌರವ; ಇಲ್ಲಿದೆ ಇತರ ವಿಜೇತರ ವಿವರ...

sports awards web
Published on

ನವದೆಹಲಿ: ಉಡುಪಿ ಮೂಲದ ಬ್ಯಾಡ್ಮಿಂಟನ್​ ತಾರೆ ಚಿರಾಗ್​ ಶೆಟ್ಟಿ ಮತ್ತು ಅವರ ಡಬಲ್ಸ್​ ಜತೆಗಾರ ಸಾತ್ವಿಕ್​ ಸಾಯಿರಾಜ್​ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಕ್ರೀಡಾ ಸಚಿವಾಲಯ 2023ರ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಿದ್ದು, ಏಕದಿನ ವಿಶ್ವಕಪ್​ನಲ್ಲಿ ಸರ್ವಾಧಿಕ ವಿಕೆಟ್​ ಕಬಳಿಸಿದ ಟೀಮ್​ ಇಂಡಿಯಾ ವೇಗಿ ಮೊಹಮದ್​ ಶಮಿ, ಪ್ರೊ ಕಬಡ್ಡಿ ಲೀಗ್​ನ ಅತಿ ದುಬಾರಿ ಆಟಗಾರ ಪವನ್​ ಕುಮಾರ್​ ಶೆರಾವತ್​, ಟೇಬಲ್​ ಟೆನಿಸ್​ ತಾರೆ ಐಹಿಕಾ ಮುಖರ್ಜಿ, ಕುಸ್ತಿಪಟು ಅಂತಿಮ್​ ಪಾಂಗಲ್​ ಸಹಿತ 26 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 8 ಕೋಚ್​ಗಳು ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗಿದ್ದರೆ, ಮೂವರು ಮಾಜಿ ಕ್ರೀಡಾಪಟುಗಳು ಜೀವಮಾನ ಸಾಧನೆಗಾಗಿ ಧ್ಯಾನ್​ಚಂದ್​ ಪ್ರಶಸ್ತಿ ಗೌರವ ಪಡೆದಿದ್ದಾರೆ.

ಚಿರಾಗ್​-ಸಾತ್ವಿಕ್​ ಜೋಡಿ ಹಾಲಿ ವರ್ಷ ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಜಯಿಸಿದ್ದರೆ, ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಕಂಚು ಜಯಿಸಿತ್ತು. ಈ ಮೂಲಕ ವಿಶ್ವ ನಂ. 1 ಪಟ್ಟಕ್ಕೂ ಲಗ್ಗೆಯಿಟ್ಟಿತ್ತು. 33 ವರ್ಷದ ಮೊಹಮದ್​ ಶಮಿ ವಿಶ್ವಕಪ್​ನಲ್ಲಿ 7 ಪಂದ್ಯಗಳಲ್ಲೇ 24 ವಿಕೆಟ್​ ಕಬಳಿಸಿ ಮಿಂಚಿದ್ದರೆ, ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದ ಭಾರತ ತಂಡದ ನಾಯಕ ಪವನ್​ ಶೆರಾವತ್​ ಪ್ರೊ ಕಬಡ್ಡಿ ಲೀಗ್​ ಆಟಗಾರರ ಹರಾಜಿನಲ್ಲಿ ದಾಖಲೆಯ 2.61 ಕೋಟಿ ರೂ.ಗೆ ಬಿಕರಿಯಾಗಿದ್ದರು.

ಇನ್ನುಳಿದಂತೆ ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದ ಬಿಲ್ಗಾರರಾದ ಓಜಸ್​ ಪ್ರವಿಣ್​, ಅದಿತಿ ಗೋಪಿಚಂದ್​ ಸ್ವಾಮಿ, ಗ್ರಾಂಡ್​ಮಾಸ್ಟರ್​ ಪಟ್ಟವೇರಿದ ಚೆಸ್​ ಆಟಗಾರ್ತಿ ಆರ್​. ವೈಶಾಲಿ, ಎರಡೂ ಕೈಗಳಿಲ್ಲದಿದ್ದರೂ ಕಾಲಿನಿಂದಲೇ ಗುರಿಯಿಟ್ಟು ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಅವಳಿ ಚಿನ್ನ ಗೆದ್ದ ಬಿಲ್ಗಾರ್ತಿ ಶೀತಲ್​ ದೇವಿ, ಅಂಧರ ಕ್ರಿಕೆಟ್​ ತಂಡದ ನಾಯಕ ಅಜಯ್​ಕುಮಾರ್​ ರೆಡ್ಡಿ ಅರ್ಜುನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

2023ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರು:

*ಮೇಜರ್​ ಧ್ಯಾನ್​ಚಂದ್​ ಖೇಲ್​ರತ್ನ: ಚಿರಾಗ್​ ಶೆಟ್ಟಿ, ಸಾತ್ವಿಕ್​ ಸಾಯಿರಾಜ್​ (ಬ್ಯಾಡ್ಮಿಂಟನ್​).

*ಅರ್ಜುನ: ಓಜಸ್​ ಪ್ರವಿಣ್​ ದೇವತಾಲ್​, ಅದಿತಿ ಗೋಪಿಚಂದ್​ ಸ್ವಾಮಿ (ಆರ್ಚರಿ), ಶ್ರೀಶಂಕರ್​ ಎಂ, ಪಾರುಲ್​ ಚೌಧರಿ (ಅಥ್ಲೆಟಿಕ್ಸ್​), ಮೊಹಮದ್​ ಹುಸಾಮುದ್ದೀನ್​ (ಬಾಕ್ಸಿಂಗ್​), ಆರ್​. ವೈಶಾಲಿ (ಚೆಸ್​), ಮೊಹಮದ್​ ಶಮಿ (ಕ್ರಿಕೆಟ್​), ಅನುಷ್​ ಅಗರ್ವಾಲ್​, ದಿವ್ಯಾಕೃತಿ ಸಿಂಗ್​ (ಈಕ್ವೆಸ್ಟ್ರಿಯನ್​), ದೀಾ ದಾಗರ್​ (ಗಾಲ್ಫ್​), ಕೃಷ್ಣ ಬಹದೂರ್​ ಪಾಠಕ್​, ಸುಶೀಲಾ ಚಾನು (ಹಾಕಿ), ಪವನ್​ ಕುಮಾರ್​ ಶೆರಾವತ್​, ರಿತು ನೇಗಿ (ಕಬಡ್ಡಿ), ನಸ್ರೀನ್​ (ಖೋಖೋ), ಪಿಂಕಿ (ಲಾನ್​ಬೌಲ್​), ಐಶ್ವರಿ ಪ್ರತಾಪ್​ ಸಿಂಗ್​, ಇಶಾ ಸಿಂಗ್​ (ಶೂಟಿಂಗ್​), ಹರಿಂದರ್​ ಪಾಲ್​ ಸಿಂಗ್​ ಸಂಧು (ಸ್ಕಾ$$$್ವಷ್​), ಐಹಿಕಾ ಮುಖರ್ಜಿ (ಟೇಬಲ್​ ಟೆನಿಸ್​), ಸುನೀಲ್​ ಕುಮಾರ್​, ಅಂತಿಮ್​ ಪಾಂಗಲ್​ (ಕುಸ್ತಿ), ರೋಶಿಬಿನಾ ದೇವಿ (ವುಶು), ಶೀತಲ್​ ದೇವಿ (ಪ್ಯಾರಾ ಆರ್ಚರಿ), ಅಜಯ್​ಕುಮಾರ್​ ರೆಡ್ಡಿ (ಅಂಧರ ಕ್ರಿಕೆಟ್​), ಪ್ರಾಚಿ ದೇಸಾಯಿ (ಪ್ಯಾರಾ ಕನೋಯಿಂಗ್​).

*ದ್ರೋಣಾಚಾರ್ಯ: ಲಲಿತ್​ ಕುಮಾರ್​ (ಕುಸ್ತಿ), ಆರ್​ಬಿ ರಮೇಶ್​ (ಚೆಸ್​), ಮಹಾವೀರ್​ ಪ್ರಸಾದ್​ ಸೈನಿ (ಪ್ಯಾರಾ ಅಥ್ಲೆಟಿಕ್ಸ್​), ಶಿವೇಂದ್ರ ಸಿಂಗ್​ (ಹಾಕಿ), ಗಣೇಶ್​ ಪ್ರಭಾಕರ್​ ದೇವುಕ್ಕರ್​ (ಮಲ್ಲಕಂಬ), ಜಸ್ಕಿರತ್​ ಸಿಂಗ್​ ಗ್ರೆವಾಲ್​ (ಗಾಲ್ಫ್​), ಭಾಸ್ಕರನ್​ ಇ. (ಕಬಡ್ಡಿ), ಜಯಂತ್​ ಪುಶಿಲಾಲ್​ (ಟೇಬಲ್​ ಟೆನಿಸ್​).

*ಜೀವಮಾನ ಸಾಧನೆಗಾಗಿ ಧ್ಯಾನ್​ಚಂದ್​: ಮಂಜುಷಾ ಕನ್ವರ್​ (ಬ್ಯಾಡ್ಮಿಂಟನ್​), ವಿನೀತ್​ ಕುಮಾರ್​ ಶರ್ಮ (ಹಾಕಿ), ಕವಿತಾ ಸೆಲ್ವರಾಜ್​ (ಕಬಡ್ಡಿ).

*ಮೌಲಾನಾ ಅಬುಲ್​ ಕಲಾಂ ಆಜಾದ್​ ಟ್ರೋಫಿ: ಗುರುನಾನಕ್​ ದೇವ್​ ವಿವಿ, ಅಮೃತಸರ; ಲವ್ಲಿ ಪ್ರೊೆಷನಲ್​ ವಿವಿ ಪಂಜಾಬ್​; ಕುರುಕ್ಷೇತ್ರ ವಿವಿ.

ಜನವರಿ 9ರಂದು ಪ್ರದಾನ

ಖೇಲ್​ರತ್ನ ಸಹಿತ ಎಲ್ಲ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುಮುರ್ ಅವರು ಜನವರಿ 9ರಂದು ಬೆಳಗ್ಗೆ 11 ಗಂಟೆಯಿಂದ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ. ಖೇಲ್​ರತ್ನ ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಮತ್ತು 25 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಅರ್ಜುನ ಪ್ರಶಸ್ತಿಯು ಅರ್ಜುನನ ಪ್ರತಿಮೆ, ಪ್ರಶಸ್ತಿ ಪತ್ರ, 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ದ್ರೋಣಾಚಾರ್ಯ ಪ್ರಶಸ್ತಿಯು ದ್ರೋಣಾಚಾರ್ಯರ ಪ್ರತಿಮೆ, ಪ್ರಶಸ್ತಿಪತ್ರ, 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಧ್ಯಾನ್​ಚಂದ್​ ಜೀವಮಾನ ಸಾಧನೆ ಪ್ರಶಸ್ತಿಯು ಧ್ಯಾನ್​ಚಂದ್​ ಪ್ರತಿಮೆ, ಪ್ರಶಸ್ತಿಪತ್ರ, 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

*ಈ ಬಾರಿ ವಿಳಂಬ

ರಾಷ್ಟ್ರೀಯ ಕ್ರೀಡಾಪ್ರಶಸ್ತಿಗಳನ್ನು ಸಾಮಾನ್ಯವಾಗಿ ರಾಷ್ಟ್ರೀಯ ಕ್ರೀಡಾದಿನವಾದ ಆಗಸ್ಟ್​ 29ರಂದು ಪ್ರದಾನ ಮಾಡಲಾಗುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ನಡೆದ ಹಾಂಗ್​ರೆೌ ಏಷ್ಯನ್​ ಗೇಮ್ಸ್​ ಮತ್ತು ಏಷ್ಯನ್​ ಪ್ಯಾರಾ ಗೇಮ್ಸ್​ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಕಾರಣದಿಂದಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನೇ ವಿಳಂಬಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net