ಏರಿಕೆಯಾಗಲಿದೆ ಖೇಲ್‌ರತ್ನ, ಅರ್ಜುನ ಪ್ರಶಸ್ತಿ ಬಹುಮಾನ ಮೊತ್ತ

national sports awards for web...
Published on

ನವದೆಹಲಿ: ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಾದ ಖೇಲ್ ರತ್ನ ಪ್ರಶಸ್ತಿ ಮೊತ್ತವನ್ನು 25 ಲಕ್ಷ ರೂಪಾಯಿಗೆ ಹಾಗೂ ಅರ್ಜುನ ಪ್ರಶಸ್ತಿ ಮೊತ್ತವನ್ನು 15 ಲಕ್ಷ ರೂಪಾಯಿಗೆ ಏರಿಸಲು ಕ್ರೀಡಾ ಸಚಿವಾಲಯ ಚಿಂತನೆ ನಡೆಸಿದೆ. ಸದ್ಯ ಖೇಲ್ ರತ್ನಗೆ 7.5 ಲಕ್ಷ ಹಾಗೂ ಅರ್ಜುನ ಪ್ರಶಸ್ತಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಈ ಕುರಿತು ಕ್ರೀಡಾ ಸಚಿವಾಲಯದಿಂದ ಅಂತಿಮ ರೂಪು ರೇಷೆಗಳು ನಡೆಯುತ್ತಿದ್ದು, ರಾಷ್ಟ್ರೀಯ ಕ್ರೀಡಾ ದಿನಾಚರಣೆ ದಿನವಾದ ಆಗಸ್ಟ್ 29 ರಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ನೀಡುತ್ತಿರುವ ಪ್ರಶಸ್ತಿ ಮೊತ್ತ ತುಂಬಾ ಕಡಿಮೆಯಾಗಿದ್ದು, ಪ್ರಶಸ್ತಿ ಮೊತ್ತವನ್ನು ಪರಿಷ್ಕರಿಸಬೇಕು ಎಂದು ಹಲವು ವರ್ಷಗಳಿಂದ ಕೂಗು ಕೇಳಿ ಬಂದಿತ್ತು.

ಬಹುಮಾನ ಏರಿಕೆ ಕುರಿತು ಕ್ರೀಡಾ ಸಚಿವಾಲಯದಿಂದ ಪ್ರಸ್ತಾವನೆ ಅಂತಿಮಗೊಂಡಿದ್ದು, ಸರ್ಕಾರ ಒಪ್ಪಿದರೆ ಪ್ರಸಕ್ತ ವರ್ಷದಿಂದಲೇ ಬಹುಮಾನ ಮೊತ್ತ ಏರಿಕೆಯಾಗಲಿದೆ ಎಂದು ಕ್ರೀಡಾ ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ, ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರವಿ ಮಿತ್ತಲ್ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಪ್ರಸಕ್ತ ವರ್ಷ 5 ಮಂದಿಗೆ ಖೇಲ್ ರತ್ನ, 29 ಮಂದಿಗೆ ಅರ್ಜುನ ಪ್ರಶಸ್ತಿ, 13 ಕೋಚ್‌ಗಳಿಗೆ ದ್ರೋಣಾಚಾರ್ಯ ಹಾಗೂ ಜೀವಮಾನ ಸಾಧನೆಗಾಗಿ 15 ಮಂದಿ ಹೆಸರನ್ನು ಧ್ಯಾನ್‌ಚಂದ್ ಪ್ರಶಸ್ತಿಗೆ ಶಿಾರಸು ಮಾಡಲಾಗಿದೆ.

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಳಗೊಂಡ 12 ಸದಸ್ಯರ ಆಯ್ಕೆ ಸಮಿತಿ ಶಿಾರಸು ಮಾಡಿರುವ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಅಂತಿಮಗೊಳಿಸಬೇಕಿದೆ. 2009ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಬಹುಮಾನ ಮೊತ್ತವನ್ನು ಪರಿಷ್ಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net