

Rohit Sharma : ರೋಹಿತ್ ಶರ್ಮ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ. ಅಷ್ಟೇ ಅಲ್ಲ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಕೂಡ. ಹೀಗಾಗಿ ಜನರಿಗೆ ರೋಹಿತ್ ಹಾಗೂ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿಯೇ ಇರುತ್ತದೆ. ರೋಹಿತ್ ಪತ್ನಿ ರಿತಿಕಾ ಸಾಜ್ದೇಹ್, ಕಳೆದ ವರ್ಷವಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದರು. ರೋಹಿತ್ ಗಂಡು ಮಗುವಿನ ತಂದೆಯಾಗಿದ್ದು, ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೂಡ ಸಂಭ್ರಮಿಸಿದರು.
ಅಂದಹಾಗೆ, ರೋಹಿತ್ ಮತ್ತು ರಿತಿಕಾ 2015ರಲ್ಲಿ ವಿವಾಹವಾದರು. ರೋಹಿತ್ ಅವರ ಪತ್ನಿ ಮತ್ತು ಮಗಳು ಸಮೈರಾ ಆಗಾಗ ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರುತ್ತಿರುತ್ತಾರೆ. ಇನ್ನು ಮಗಳು ಸಮೈರಾ ಅಂದ್ರೆ ರೋಹಿತ್ಗೆ ತುಂಬಾ ಇಷ್ಟ. ಸಮಯ ಸಿಕ್ಕಾಗಲೆಲ್ಲ ಆಕೆಯ ಜತೆ ಮಗುವಿನಂತೆ ಆಡುತ್ತಿರುತ್ತಾರೆ. ಇಬ್ಬರ ನಡುವಿನ ಪ್ರೀತಿಗೆ ಸಂಬಂಧಿಸಿದ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಅಭಿಮಾನಿಗಳಿಂದ ರೋಹಿತ್ ಪಡೆಯುವ ಅದೇ ಪ್ರೀತಿಯನ್ನು ಅವರ ಮಗಳು ಸಮೈರಾ ಸಹ ಸ್ವೀಕರಿಸುತ್ತಾರೆ.
ರೋಹಿತ್ ಶರ್ಮ ಅವರ ಮಗಳು ಸಮೈರಾಗೆ ಈಗ 6 ವರ್ಷ. ಆಕೆಯ ಶಾಲೆಯ ವಿವರಗಳು ಈಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಆಕೆ ಯಾವ ಶಾಲೆಯಲ್ಲಿ ಓದುತ್ತಿದ್ದಾಳೆ? ರೋಹಿತ್ ಅಲ್ಲಿ ಎಷ್ಟು ಶುಲ್ಕ ಪಾವತಿಸುತ್ತಿದ್ದಾರೆ? ಈ ಕುರಿತಾದ ಮಾಹಿತಿ ಇತ್ತೀಚೆಗಷ್ಟೇ ಹೊರಬಂದಿದೆ.
ಅಂದಹಾಗೆ, ರೋಹಿತ್ ಶರ್ಮ ತಮ್ಮ ಮಗಳಿಗೆ ಭಾರತದ ಅತ್ಯುತ್ತಮ ಶಾಲೆಗಳಲ್ಲಿ ಒಂದಾದ ಮುಂಬೈನ ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಅಂಬಾನಿ ಕುಟುಂಬ 2003ರಲ್ಲಿ ಈ ಶಾಲೆಯನ್ನು ಪ್ರಾರಂಭಿಸಿತು. ಈ ಶಾಲೆಯು LKG ಯಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ಒದಗಿಸುತ್ತದೆ.
2023-24ನೇ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ ಮಕ್ಕಳಿಗೆ ಇಲ್ಲಿ ವಾರ್ಷಿಕ ಬೋಧನಾ ಶುಲ್ಕ 14 ಲಕ್ಷ ರೂಪಾಯಿ. 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇದು 20 ಲಕ್ಷ ರೂಪಾಯಿ. ಈ ಮೊತ್ತವು ಸಮವಸ್ತ್ರ, ಅವಧಿ ಶುಲ್ಕ, ಪುಸ್ತಕಗಳು ಮತ್ತು ಮಕ್ಕಳ ಸಾರಿಗೆಯನ್ನು ಒಳಗೊಂಡಿದೆ. ಭಾರತದ ಅನೇಕ ಸೆಲೆಬ್ರಿಟಿಗಳ ಮಕ್ಕಳು ರಿಲಯನ್ಸ್ ಗ್ರೂಪ್‌ನ ಈ ಶಾಲೆಯಲ್ಲಿ ಓದುತ್ತಿದ್ದಾರೆ. (ಏಜೆನ್ಸೀಸ್)