

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಭಾನುವಾರ ನಡೆಯಲಿರುವ ಕೊನೆಯ ಲೀಗ್ ಪಂದ್ಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಾಲಿಗೆ 300ನೇ ಏಕದಿನ ಪಂದ್ಯವೆನಿಸಿದೆ. ಅವರು ಈ ಸಾಧನೆ ಮಾಡಲಿರುವ 22ನೇ ಆಟಗಾರ ಮತ್ತು 7ನೇ ಭಾರತೀಯ ಎನಿಸಲಿದ್ದಾರೆ.
1998ರಲ್ಲಿ ಮೊಹಮದ್ ಅಜರುದ್ದೀನ್ 300 ಏಕದಿನ ಪಂದ್ಯವಾಡಿದ ಮೊದಲ ಆಟಗಾರ ಎನಿಸಿದ್ದರು. ಅವರ 300ನೇ ಪಂದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಮೊದಲ ಪಂದ್ಯವೆನಿಸಿತ್ತು. ಇದೀಗ 36 ವರ್ಷದ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲೇ ಈ ಸಾಧನೆ ಮಾಡಲಿರುವುದು ವಿಶೇಷವಾಗಿದೆ.
ಅಜರುದ್ದೀನ್ (334) ಜತೆಗೆ ಸಚಿನ್ ತೆಂಡುಲ್ಕರ್ (463), ಎಂಎಸ್ ಧೋನಿ (350), ರಾಹುಲ್ ದ್ರಾವಿಡ್ (344), ಸೌರವ್ ಗಂಗೂಲಿ (311) ಮತ್ತು ಯುವರಾಜ್ ಸಿಂಗ್ (304) 300 ಏಕದಿನ ಪಂದ್ಯ ಆಡಿರುವ ಇತರ ಭಾರತೀಯರಾಗಿದ್ದಾರೆ.
2008ರಲ್ಲಿ ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಇದುವರೆಗೆ ಆಡಿದ 299 ಪಂದ್ಯಗಳ 287 ಇನಿಂಗ್ಸ್ಗಳಲ್ಲಿ 51 ಶತಕ, 73 ಅರ್ಧಶತಕಗಳ ಸಹಿತ 58.20ರ ಸರಾಸರಿಯಲ್ಲಿ 14,085 ರನ್ ಬಾರಿಸಿದ್ದಾರೆ. ಜತೆಗೆ 158 ಕ್ಯಾಚ್ ಹಿಡಿದಿದ್ದು, 5 ವಿಕೆಟ್ ಕೂಡ ಕಬಳಿಸಿದ್ದಾರೆ. 1,318 ಬೌಂಡರಿ ಮತ್ತು 152 ಸಿಕ್ಸರ್ ಸಿಡಿಸಿದ್ದಾರೆ. 183 ರನ್ ಅವರ ಗರಿಷ್ಠ ಗಳಿಕೆಯಾಗಿದೆ.
ಕೊಹ್ಲಿ ಏಕದಿನ ಮೈಲಿಗಲ್ಲು
ಮೊದಲ ಪಂದ್ಯ: 2008ರಲ್ಲಿ ಶ್ರೀಲಂಕಾ ವಿರುದ್ಧ (ಡಂಬುಲಾ): 12 ರನ್
50ನೇ ಪಂದ್ಯ: 2011ರಲ್ಲಿ ದ. ಆಫ್ರಿಕಾ ವಿರುದ್ಧ (ನಾಗ್ಪುರ): 1 ರನ್
100ನೇ ಪಂದ್ಯ: 2013ರಲ್ಲಿ ವಿಂಡೀಸ್ ವಿರುದ್ಧ (ಓವಲ್): 22 ರನ್
150ನೇ ಪಂದ್ಯ: 2015ರಲ್ಲಿ ಇಂಗ್ಲೆಂಡ್ ವಿರುದ್ಧ (ಪರ್ತ್): 8 ರನ್
200ನೇ ಪಂದ್ಯ: 2017ರಲ್ಲಿ ಕಿವೀಸ್ ವಿರುದ್ಧ (ಮುಂಬೈ): 121 ರನ್
250ನೇ ಪಂದ್ಯ: 2020ರಲ್ಲಿ ಆಸೀಸ್ ವಿರುದ್ಧ (ಬೆಂಗಳೂರು): 89 ರನ್
300ನೇ ಪಂದ್ಯ: 2025ರಲ್ಲಿ ಕಿವೀಸ್ ವಿರುದ್ಧ (ದುಬೈ): ?