

ಬಾರ್ಸಿಲೋನಾ: ಆಸ್ಟ್ರೆಲಿಯಾದ ಸಿಡ್ನಿಯಲ್ಲಿ ಕಳೆದ ಭಾನುವಾರ ನಡೆದ ಮಹಿಳೆಯರ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಸ್ಪೇನ್ ತಂಡ ಚೊಚ್ಚಲ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿತು. ಆದರೆ ಪಂದ್ಯದ ಬಳಿಕ ಸ್ಪೇನ್ ಫುಟ್ಬಾಲ್ ಒಕ್ಕೂಟದ ಮುಖ್ಯಸ್ಥ ಲೂಯಿಸ್ ರುಬಿಯಾಲೆಸ್, ಸ್ಪೇನ್ ತಂಡದ ಪ್ರಮುಖ ಆಟಗಾರ್ತಿ ಜೆನ್ನಿರ್ ಹೆಮೋರ್ಸೋ ಅವರನ್ನು ವೇದಿಕೆ ಮೇಲೆ ಅಭಿನಂದಿಸುವ ಸಮಯದಲ್ಲಿ ತುಟಿಗೆ ಮುತ್ತಿಟ್ಟರು. ಈ ಘಟನೆಯಿಂದ ಆಟಗಾರ್ತಿ ವಿಚಲಿತರಾದರೆ, ಸಂಪೂರ್ಣ ಸ್ಪೇನ್ ತಂಡದ ಸಂಭ್ರಮಾಚರಣೆಗೂ ಮಸಿ ಬಳಿಯಿತು. ಇದರಿಂದಾಗಿ ಸ್ಪೇನ್ ಸರ್ಕಾರ ಈಗ ಟನೆಯ ಬಗ್ಗೆ ಸಂಪೂರ್ಣ ಪಾರದರ್ಶನ ತನಿಖೆಗೆ ಮುಂದಾಗಿದೆ.
ಭಾರಿ ಟೀಕೆಗಳ ನಡುವೆಯೂ, ಆಟಗಾರ್ತಿಗೆ ಮುತ್ತಿಟ್ಟಿದ್ದನ್ನು ಮೊದಲಿಗೆ ಸಮರ್ಥಿಸಿಕೊಂಡಿದ್ದ 46 ವರ್ಷದ ಲೂಯಿಸ್ ರುಬಿಯಾಲೆಸ್, ಬಳಿಕ ಕ್ಷಮೆಯಾಚಿಸಿದ್ದರು. ಆದರೂ ಅವರ ಆ ರೀತಿಯ ವರ್ತನೆಯ ಬಗ್ಗೆ ಟೀಕೆಗಳು ಇನ್ನೂ ಮುಂದುವರಿದಿವೆ.
ಟನೆ ಬಗ್ಗೆ ತನಿಖೆಗೆ ಸ್ಪೇನ್ ಫುಟ್ಬಾಲ್ ಒಕ್ಕೂಟ ಈಗಾಗಲೆ ಆಂತರಿಕ ಸಮಿತಿ ರಚಿಸಿದೆ. ಅಲ್ಲದೆ ತನ್ನ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಒತ್ತಡವನ್ನೂ ಎದುರಿಸುತ್ತಿದೆ. ಆದರೆ ಸ್ಪೇನ್ ಫುಟ್ಬಾಲ್ ಒಕ್ಕೂಟದ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿರದ ಸ್ಪೇನ್ ಪ್ರಧಾನಿ ಫೆಡ್ರೊ ಸ್ಯಾಂಚೆಜ್, ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದಾರೆ.