ವಿಶ್ವಕಪ್​ಗಾಗಿ ನಿವೃತ್ತಿ ಹಿಂಪಡೆದ ಕ್ರಿಕೆಟಿಗರಲ್ಲಿ ಸ್ಟೋಕ್ಸ್​ ಮೊದಲಿಗರಲ್ಲ! ಇಲ್ಲಿದೆ ಲಿಸ್ಟ್​…

retire return web
Published on

ಬೆಂಗಳೂರು: ಮುಂಬರುವ ಏಕದಿನ ವಿಶ್ವಕಪ್​ನಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡದ ಬಲ ಹೆಚ್ಚಿಸುವ ಸಲುವಾಗಿ ಸ್ಟಾರ್​ ಆಲ್ರೌಂಡರ್​ ಬೆನ್​ ಸ್ಟೋಕ್ಸ್​ ಮರಳಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಟೆಸ್ಟ್​-ಟಿ20 ಕ್ರಿಕೆಟ್​ನತ್ತ ಗಮನ ಕೇಂದ್ರೀಕರಿಸುವ ಸಲುವಾಗಿ ಏಕದಿನ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದ ಸ್ಟೋಕ್ಸ್​ ಬಳಿಕ ಇಂಗ್ಲೆಂಡ್​ ತಂಡದ ಟೆಸ್ಟ್​ ನಾಯಕರಾಗಿಯೂ ಉತ್ತಮ ಯಶಸ್ಸು ಕಂಡಿದ್ದರು ಮತ್ತು ಕಳೆದ ವರ್ಷ ಟಿ20 ವಿಶ್ವಕಪ್​ ಗೆದ್ದ ಇಂಗ್ಲೆಂಡ್​ ತಂಡದ ಭಾಗವೂ ಆಗಿದ್ದರು. ಇದೀಗ, 2019ರಲ್ಲಿ ಗೆದ್ದ ಏಕದಿನ ವಿಶ್ವಕಪ್​ ಉಳಿಸಿಕೊಳ್ಳಲು ಇಂಗ್ಲೆಂಡ್​ ತಂಡಕ್ಕೆ ನೆರವಾಗುವ ಸಲುವಾಗಿ ಅವರು ಜೋಸ್​ ಬಟ್ಲರ್​ ಪಡೆಯನ್ನು ಸೇರಿಕೊಂಡಿದ್ದಾರೆ. ಈ ರೀತಿಯಾಗಿ ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ನಿವೃತ್ತಿಯನ್ನು ಹಿಂಪಡೆದು ತಂಡ ಸೇರಿಕೊಳ್ಳುತ್ತಿರುವ ಕ್ರಿಕೆಟಿಗರಲ್ಲಿ ಸ್ಟೋಕ್ಸ್​ ಮೊದಲಿಗರೇನಲ್ಲ. ಅಂಥ ಕೆಲ ಆಟಗಾರರ ವಿವರ ಇಲ್ಲಿದೆ...

ಇಮ್ರಾನ್​ ಖಾನ್​ (ಪಾಕಿಸ್ತಾನ)

ಪಾಕಿಸ್ತಾನದ ದಿಗ್ಗಜ ನಾಯಕ, ಆಲ್ರೌಂಡರ್​ ಹಾಗೂ ಮಾಜಿ ಪ್ರಧಾನಿಯೂ ಆಗಿರುವ ಇಮ್ರಾನ್​ ಖಾನ್​ 1992ರ ಏಕದಿನ ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ನಿವೃತ್ತಿಯನ್ನು ಹಿಂಪಡೆದಿದ್ದರು. 1987ರ ಏಕದಿನ ವಿಶ್ವಕಪ್​ ಬೆನ್ನಲ್ಲೇ ಇಮ್ರಾನ್​ ಖಾನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು. ಆದರೆ 1988ರಲ್ಲಿ ಆಗಿನ ಪಾಕ್​ ಅಧ್ಯಕ್ಷ ಜಿಯಾ ಉಲ್​ ಹಕ್​ ಮನವಿಯ ಮೇರೆಗೆ ಇಮ್ರಾನ್​ ಖಾನ್​ ನಿವೃತ್ತಿಯನ್ನು ವಾಪಸ್​ ಪಡೆದಿದ್ದರು. ಬಳಿಕ 1992ರ ವಿಶ್ವಕಪ್​ನಲ್ಲಿ ಪಾಕಿಸ್ತಾನ ತಂಡದ ನಾಯಕತ್ವವನ್ನೂ ವಹಿಸಿದ್ದ ಇಮ್ರಾನ್​ ಪ್ರಶಸ್ತಿ ಗೆದ್ದು ಅಮೋಘ ರೀತಿಯಲ್ಲಿ 2ನೇ ಬಾರಿಗೆ ವಿದಾಯ ಸಾರಿದರು.

ಶಾಹಿದ್​ ಅಫ್ರಿದಿ (ಪಾಕಿಸ್ತಾನ)

ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಲ್ರೌಂಡರ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಘೋಷಿಸಿದ ನಿವೃತ್ತಿಯನ್ನು ಒಟ್ಟು 5 ಬಾರಿ ಹಿಂಪಡೆದಿದ್ದಾರೆ. 2011ರ ವಿಶ್ವಕಪ್​ ಬಳಿಕ ನಿವೃತ್ತಿ ಪ್ರಕಟಿಸಿದ್ದ ಅಫ್ರಿದಿ ನಂತರ 2015ರ ವಿಶ್ವಕಪ್​ ಅಡುವ ಸಲುವಾಗಿ ಪಾಕಿಸ್ತಾನ ತಂಡಕ್ಕೆ ಮರಳಿದ್ದರು. ಇದಕ್ಕೆ ಮುನ್ನ 2006ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದ ಅವರು, 2010ರಲ್ಲಿ ಮತ್ತೆ ಟೆಸ್ಟ್​ ಆಡಿದ್ದರು. 2017ರಲ್ಲಿ ಕೊನೆಗೂ ಅವರು ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ಡ್ವೇನ್​ ಬ್ರಾವೊ (ವೆಸ್ಟ್​ ಇಂಡೀಸ್​)

ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಡ್ವೇನ್​ ಬ್ರಾವೊ 2018ರ ಅಕ್ಟೋಬರ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಆದರೆ 2019ರಲ್ಲಿ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿಯ ಮನವಿಯ ಮೇರೆಗೆ ಮನಸ್ಸು ಬದಲಾಯಿಸಿದ್ದ ಅವರು, 2021ರ ಟಿ20 ವಿಶ್ವಕಪ್​ ವೇಳೆ ಮತ್ತೆ ತಂಡಕ್ಕೆ ಮರಳಿ ಆಡಿದ್ದರು.

ತಮೀಮ್​ ಇಕ್ಬಾಲ್​ (ಬಾಂಗ್ಲಾದೇಶ)

ಬಾಂಗ್ಲಾದೇಶದ ಎಡಗೈ ಆರಂಭಿಕ ತಮೀಮ್​ ಇಕ್ಬಾಲ್​ ಇತ್ತೀಚೆಗೆ ವಿಶ್ವಕಪ್​ ಪೂರ್ವಭಾವಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಪ್ರಕಟಿಸಿದ್ದರು. ಆದರೆ, ಬಾಂಗ್ಲಾ ಪ್ರಧಾನಿ ಶೇಕ್​ ಹಸೀನಾ ಮನವಿಯ ಮೇರೆಗೆ ಮರುದಿನವೇ ನಿರ್ಧಾರವನ್ನು ಬದಲಾಯಿಸಿದ್ದ ತಮೀಮ್​, ಏಕದಿನ ವಿಶ್ವಕಪ್​ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ತಿಳಿಸಿದ್ದರು. ಆದರೆ ಬಾಂಗ್ಲಾ ಏಕದಿನ ತಂಡದ ನಾಯಕತ್ವವನ್ನು ಮರಳಿ ಸ್ವೀಕರಿಸಲು ನಿರಾಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net