

ಬೆಂಗಳೂರು: ಕರ್ನಾಟಕದ ಯುವ ಓಟಗಾರ್ತಿ ಉನ್ನತಿ ಅಯ್ಯಪ್ಪ ಚೆನ್ನೈನಲ್ಲಿ ಶುಕ್ರವಾರ ಮುಕ್ತಾಯಗೊಂಡ 4ನೇ ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 2ನೇ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಗುರುವಾರವಷ್ಟೇ ಮಹಿಳೆಯರ 100 ಮೀ. ಹರ್ಡಲ್ಸ್ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದ ಉನ್ನತಿ, ಶುಕ್ರವಾರ ನಡೆದ 200 ಮೀ. ಓಟದಲ್ಲೂ ದಾಖಲೆಯೊಂದಿಗೆ ಸ್ವರ್ಣಕ್ಕೆ ಕೊರಳೊಡ್ಡಿದರು.
ಉನ್ನತಿ 23.91 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ 2013ರಲ್ಲಿ ಸುಸೀಂದ್ರನ್ 24.32 ಸೆಕೆಂಡ್ಗಳಲ್ಲಿ ಓಡಿ ನಿರ್ಮಿಸಿದ್ದ ಕೂಟದಾಖಲೆ ಅಳಿಸಿದರು. ಈ ಸ್ಪರ್ಧೆಯಲ್ಲಿ ಎಲ್ಲ 3 ಪದಕ ಭಾರತದ ಪಾಲಾಯಿತು. ನ್ಯಾನ್ಸಿ ಬೆಳ್ಳಿ ಮತ್ತು ನೀರು ಪಾಠಕ್ ಕಂಚು ಒಲಿಸಿಕೊಂಡರು.
ಕರ್ನಾಟಕದ ನೋಯೆಲ್ ಕಾರ್ನೆಲಿಯೊ ಮತ್ತು ಸುಧೀಕ್ಷಾ ವಿ. ಒಳಗೊಂಡ ಭಾರತದ ಮಹಿಳೆಯರ 4/100 ಮೀ. ರಿಲೇ ತಂಡವೂ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡಿತು. 45.08 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ 2018ರಲ್ಲಿ ಕೊಲಂಬೊದಲ್ಲಿ ದಾಖಲಾಗಿದ್ದ 46.23 ಸೆಕೆಂಡ್ಗಳ ದಾಖಲೆ ಮುರಿಯಿತು.
ಆತಿಥೇಯ ಭಾರತ ತಂಡ ಈ ಕ್ರೀಡಾಕೂಟದಲ್ಲಿ 21 ಚಿನ್ನ, 22 ಬೆಳ್ಳಿ 5 ಕಂಚಿನ ಸಹಿತ 48 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು.