ಭಾರತ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾದ ಪ್ರಮುಖ ವೇಗಿಗಳು ವಾಪಸ್​

web sa team
Published on

ಜೊಹಾನ್ಸ್​ರ್ಬಗ್​: ಪ್ರವಾಸಿ ಭಾರತ ತಂಡದ ವಿರುದ್ಧ ನವೆಂಬರ್​ 8ರಿಂದ ನಡೆಯಲಿರುವ 4 ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಗುರುವಾರ ಪ್ರಕಟಗೊಂಡಿದ್ದು, ಎಡಗೈ ವೇಗಿ ಮಾಕೋರ್ ಜಾನ್ಸೆನ್​ ಮತ್ತು ವೇಗಿ ಗೆರಾಲ್ಡ್​ ಕೋಟ್​ಜೀ ವಿಶ್ರಾಂತಿಯ ಬಳಿಕ ತಂಡದಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್​ ಮಿಹ್ಲಾಲಿ ಎಂಪೊಂಗ್​ವಾನಾ ಮತ್ತು ಆಂಡಿಲ್​ ಸಿಮೆಲೇನ್​ ತಂಡದಲ್ಲಿರುವ ಹೊಸಮುಖಗಳಾಗಿದ್ದಾರೆ.

ಸರಣಿಯ ಮೊದಲ ಪಂದ್ಯ ಡರ್ಬನ್​ನಲ್ಲಿ ನಡೆಯಲಿದ್ದು, ನಂತರದ 3 ಪಂದ್ಯಗಳು ಗೆರ್ಬಹ (ನ.10), ಸೆಂಚುರಿಯನ್​ (ನ.12) ಮತ್ತು ಜೊಹಾನ್ಸ್​ರ್ಬಗ್​ನಲ್ಲಿ (ನ.15) ನಡೆಯಲಿದೆ. ದಣ ಆಫ್ರಿಕಾ ಕ್ರಿಕೆಟ್​ ಮಂಡಳಿಯ ಕಾರ್ಯದೊತ್ತಡ ನಿರ್ವಹಣಾ ನಿಯಮಾವಳಿ ಅನ್ವಯ, ಜಾನ್ಸೆನ್​ ಮತ್ತು ಕೋಟ್​ಜೀ ಟಿ20 ವಿಶ್ವಕಪ್​ ನಂತರದಲ್ಲಿ ವಿಶ್ರಾಂತಿಯಲ್ಲಿದ್ದರು. ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಗೆ ಸಿದ್ಧತೆಯಲ್ಲಿರುವ ಕಾರಣ ಮತ್ತೋರ್ವ ವೇಗಿ ಲುಂಗಿ ಎನ್​ಗಿಡಿ ಅವರನ್ನು ತಂಡಕ್ಕೆ ಪರಿಗಣಿಸಲಾಗಿಲ್ಲ.

ಅನುಭವಿ ವೇಗಿ ಆನ್ರಿಚ್​ ನೋಕಿಯಾ ಮತ್ತು ಸ್ಪಿನ್ನರ್​ ತಬರೇಜ್​ ಶಮ್ಸಿ ದ. ಆಫ್ರಿಕಾ ಕ್ರಿಕೆಟ್​ ಮಂಡಳಿಯ ವಾರ್ಷಿಕ ಗುತ್ತಿಗೆಯಿಂದ ಹೊರಗುಳಿದಿರುವುದರಿಂದ, ಆಯ್ಕೆಗೆ ಪರಿಗಣಿಸಲ್ಪಟ್ಟಿಲ್ಲ. ಏಡನ್​ ಮಾರ್ಕ್ರಮ್​ ಸಾರಥ್ಯದ 16 ಆಟಗಾರರ ತಂಡದಲ್ಲಿ ಹೆನ್ರಿಕ್​ ಕ್ಲಾಸೆನ್​, ಡೇವಿಡ್​ ಮಿಲ್ಲರ್​ ಮತ್ತು ಕೇಶವ್​ ಮಹಾರಾಜ್​ ಪ್ರಮುಖ ಆಟಗಾರರಾಗಿದ್ದಾರೆ. ವೇಗಿ ಕಗಿಸೊ ರಬಾಡಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ದ. ಆಫ್ರಿಕಾ ಟಿ20 ತಂಡ: ಏಡನ್​ ಮಾರ್ಕ್ರಮ್​ (ನಾಯಕ), ಒಟ್ನೀಲ್​ ಬಾರ್ಟ್​ಮನ್​, ಗೆರಾಲ್ಡ್​ ಕೋಟ್​ಜೀ, ಡೊನೊವನ್​ ಫೆರೇರ, ರೀಜಾ ಹೆಂಡ್ರಿಕ್ಸ್​, ಮಾಕೋರ್ ಜಾನ್ಸೆನ್​, ಹೆನ್ರಿಕ್​ ಕ್ಲಾಸೆನ್​, ಪ್ಯಾಟ್ರಿಕ್​ ಕ್ರುಗರ್​, ಕೇಶವ್​ ಮಹಾರಾಜ್​, ಡೇವಿಡ್​ ಮಿಲ್ಲರ್​, ಮಿಹ್ಲಾಲಿ ಎಂಪೊಂಗ್​ವಾನಾ, ಆಂಡಿಲ್​ ಸಿಮೆಲೇನ್​, ನಬ ಪೀಟರ್​, ರ್ಯಾನ್​ ರಿಕೆಲ್​ಟನ್​, ಲುಥೊ ಸಿಪಮ್ಲಾ, ಟ್ರಿಸ್ಟಾನ್​ ಸ್ಟಬ್ಸ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net