ರಣಜಿ ಟ್ರೋಫಿಯಲ್ಲಿ ರನ್​ಪ್ರವಾಹ ಹರಿಸುತ್ತಿರುವ ಬಾಲಿವುಡ್​ ನಿರ್ಮಾಪಕನ ಪುತ್ರ ಅಗ್ನಿ ಚೋಪ್ರಾ!

web agni
Published on

ನವದೆಹಲಿ: ಮುನ್ನಾಬಾಯಿ ಎಂಬಿಬಿಎಸ್​, 3 ಈಡಿಯಟ್ಸ್​ನಂಥ ಜನಪ್ರಿಯ ಬಾಲಿವುಡ್​ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಧುವಿನೋದ್​ ಚೋಪ್ರಾ ಮತ್ತು ಖ್ಯಾತ ಸಿನಿಮಾ ಪತ್ರಕರ್ತೆ ಅನುಪಮಾ ಚೋಪ್ರಾ ದಂಪತಿಯ ಪುತ್ರನಾಗಿರುವ ಅಗ್ನಿ ಚೋಪ್ರಾ ರಣಜಿ ಟ್ರೋಫಿ ಪ್ಲೇಟ್​ ಲೀಗ್​ನಲ್ಲಿ ಮಿಜೋರಾಂ ಪರ ರನ್​ಪ್ರವಾಹ ಹರಿಸಿದ್ದಾರೆ.

25 ವರ್ಷದ ಎಡಗೈ ಬ್ಯಾಟರ್​ ಅಗ್ನಿ ಚೋಪ್ರಾ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ ಬರೋಬ್ಬರಿ 646 ರನ್​ ಸಿಡಿಸಿದ್ದಾರೆ. ಇದರಲ್ಲಿ 2 ದ್ವಿಶತಕ ಸಹಿತ 3 ಶತಕಗಳು ಸೇರಿವೆ. ಸಿಕ್ಕಿಂ ವಿರುದ್ಧದ ಮೊದಲ ಪಂದ್ಯದಲ್ಲಿ 51, 29 ರನ್​ ಮಾತ್ರ ಗಳಿಸಿದ್ದ ಅಗ್ನಿ, 2ನೇ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 110 ಮತ್ತು ಅಜೇಯ 238 ರನ್​ ಸಿಡಿಸಿದ್ದರು. ಮಣಿಪುರ ವಿರುದ್ಧ ನಡೆಯುತ್ತಿರುವ 3ನೇ ಪಂದ್ಯದಲ್ಲಿ 269 ಎಸೆತಗಳಲ್ಲಿ 29 ಬೌಂಡರಿ, 1 ಸಿಕ್ಸರ್​ ಸಹಿತ 218 ರನ್​ ಸಿಡಿಸಿದ್ದಾರೆ.

ಇದುವರೆಗೆ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅಗ್ನಿ ಚೋಪ್ರಾ, 99ರ ಸರಾಸರಿಯಲ್ಲಿ 1,500ಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಇದರಲ್ಲಿ 8 ಶತಕ, 4 ಅರ್ಧಶತಕಗಳು ಸೇರಿವೆ. ಅಗ್ನಿ ಚೋಪ್ರಾ ಕಳೆದ ರಣಜಿ ಆವೃತ್ತಿಯಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲೂ ಶತಕ ಸಿಡಿಸಿ ವಿಶೇಷ ದಾಖಲೆ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net