ಸ್ಪಿನ್​ ಪಿಚ್​ ಈಗ ಟೀಮ್​ ಇಂಡಿಯಾದ ಬಲವಲ್ಲ, ದೌರ್ಬಲ್ಯ! ಇಲ್ಲಿದೆ ಕಾರಣ...

web spin
Published on

ಬೆಂಗಳೂರು: ಸ್ಪಿನ್​ ಬೌಲಿಂಗ್​ ಭಾರತೀಯ ಕ್ರಿಕೆಟ್​ನ ಶಕ್ತಿ. ಪ್ರವಾಸಿ ತಂಡಗಳನ್ನು ಸ್ಪಿನ್​ ಪಿಚ್​ಗಳಲ್ಲಿ ಕಟ್ಟಿಹಾಕುವ ಮೂಲಕ ಭಾರತ ತವರಿನಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿತ್ತು. ಇದಕ್ಕೆ ಭಾರತ ಕಂಡ ಕೆಲ ದಿಗ್ಗಜ ಸ್ಪಿನ್ನರ್​ಗಳಷ್ಟೇ ಪ್ರಮುಖ ಕಾರಣರಲ್ಲ. ಸ್ಪಿನ್​ ಬೌಲಿಂಗ್​ ಎದುರು ಅತ್ಯುತ್ತಮವಾಗಿ ಆಡುತ್ತಿದ್ದ ಬ್ಯಾಟರ್​ಗಳ ಕೊಡುಗೆಯೂ ಅಷ್ಟೇ ಇದೆ. ಹೀಗಾಗಿಯೇ ಮುತ್ತಯ್ಯ ಮುರಳೀಧರನ್​, ಶೇನ್​ ವಾರ್ನ್​ರಂಥ ಸ್ಪಿನ್​ ಮಾಂತ್ರಿಕರೂ ಭಾರತದಲ್ಲಿ ಹೆಚ್ಚಿನ ಯಶಸ್ಸು ಕಾಣಲಿಲ್ಲ. ಮೊಹಮದ್​ ಅಜರುದ್ದೀನ್​, ನವಜೋತ್​ ಸಿಂಗ್​ ಸಿಧು ನಂತರದಲ್ಲಿ ಸಚಿನ್​ ತೆಂಡುಲ್ಕರ್​, ರಾಹುಲ್​ ದ್ರಾವಿಡ್​, ವೀರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​, ಗೌತಮ್​ ಗಂಭೀರ್​ರಂಥ ಬ್ಯಾಟರ್​ಗಳು ಪ್ರವಾಸಿ ಸ್ಪಿನ್ನರ್​ಗಳನ್ನು ಅತ್ಯುತ್ತಮವಾಗಿ ದಂಡಿಸುತ್ತಿದ್ದರು. ಆದರೆ ಈಗ ಸ್ಪಿನ್​ ಪಿಚ್​ಗಳೇ ಭಾರತದ ದೌರ್ಬಲ್ಯವಾಗಿ ಮಾರ್ಪಟ್ಟಂತಿದೆ!

ಪುಣೆಯಲ್ಲಿ ಭಾರತ ತಾನೇ ತೋಡಿದ ಸ್ಪಿನ್​ ಖೆಡ್ಡಾಗೆ ಬಿದ್ದಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಅಶ್ವಿನ್​-ರವೀಂದ್ರ ಜಡೇಜಾ ಜೋಡಿಯ ಜತೆಗೆ ಕುಲದೀಪ್​ ಯಾದವ್​, ಅಕ್ಷರ್​ ಪಟೇಲ್​ ಮತ್ತು ವಾಷಿಂಗ್ಟನ್​ ಸುಂದರ್ ಕೂಡ 3ನೇ ಸ್ಪಿನ್ನರ್​ ಆಗಿ ಉತ್ತಮ ಯಶಸ್ಸನ್ನೇ ಕಂಡಿದ್ದಾರೆ. ಆದರೆ, ಹಾಲಿ ತಂಡದಲ್ಲಿ ಯಶಸ್ವಿ ಜೈಸ್ವಾಲ್​, ರಿಷಭ್​ ಪಂತ್​ ಬಿಟ್ಟರೆ ಇತರ ಬ್ಯಾಟರ್​ಗಳು ಸ್ಪಿನ್​ ವಿರುದ್ಧ ಕೆಟ್ಟ ರನ್​ ಸರಾಸರಿ ಹೊಂದಿದ್ದಾರೆ. ಪ್ರಮುಖವಾಗಿ ವಿರಾಟ್​ ಕೊಹ್ಲಿ 2022ರಿಂದ ಆಡಿರುವ 24 ಟೆಸ್ಟ್​ ಇನಿಂಗ್ಸ್​ಗಳಲ್ಲಿ ಸ್ಪಿನ್ನರ್​ಗಳ ಎದುರು 17 ಬಾರಿ ಔಟಾಗಿದ್ದು, ಕೇವಲ 34.29ರ ಸರಾಸರಿಯಲ್ಲಿ 583 ರನ್​ ಮಾತ್ರ ಗಳಿಸಿದ್ದಾರೆ.

ರೋಹಿತ್​ ಶರ್ಮ ಕೂಡ 23 ಇನಿಂಗ್ಸ್​ಗಳಲ್ಲಿ 18 ಬಾರಿ ಸ್ಪಿನ್ನರ್​ಗಳಿಗೆ ವಿಕೆಟ್​ ಒಪ್ಪಿಸಿದ್ದಾರೆ. ಶುಭಮಾನ್​ ಗಿಲ್​ 23ಇನಿಂಗ್ಸ್​ಗಳಲ್ಲಿ 16 ಬಾರಿ, ಕೆಎಲ್​ ರಾಹುಲ್​ 12 ಇನಿಂಗ್ಸ್​ಗಳಲ್ಲಿ 9 ಬಾರಿ, ಸರ್ಪ್ರಾಜ್​ 8 ಇನಿಂಗ್ಸ್​ಗಳಲ್ಲಿ 5 ಬಾರಿ, ರವೀಂದ್ರ ಜಡೇಜಾ 23 ಇನಿಂಗ್ಸ್​ಗಳಲ್ಲಿ 15 ಬಾರಿ ಸ್ಪಿನ್ನರ್​ಗಳ ಎದುರು ಔಟಾಗಿದ್ದಾರೆ. ಜೈಸ್ವಾಲ್​ 17 ಇನಿಂಗ್ಸ್​ಗಳಲ್ಲಿ 10 ಬಾರಿ ಸ್ಪಿನ್​ಗೆ ಔಟಾಗಿದ್ದರೂ, 87.10ರ ಸರಾಸರಿಯಲ್ಲಿ 871 ರನ್​ ಗಳಿಸಿದ್ದಾರೆ. ರಿಷಭ್​ ಪಂತ್​ 16ರಲ್ಲಿ 10 ಬಾರಿ ಸ್ಪಿನ್​ಗೆ ಔಟಾಗಿದ್ದರೂ, 57ರ ಸರಾಸರಿಯಲ್ಲಿ 570 ರನ್​ ಬಾರಿಸಿದ್ದಾರೆ.

ಗಂಭೀರ್​ಗೆ ಸ್ಥಿತ್ಯಂತರದ ಸವಾಲು

ಮುಂದಿನ ವರ್ಷದ ಜೂನ್​ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​ಗೆ ಭಾರತ ತಂಡದ ಅರ್ಹತೆ ಈಗ ತೂಗುಯ್ಯಾಲೆಯಲ್ಲಿ ನಿಂತಿದೆ. ಒಂದು ವೇಳೆ ಭಾರತ ತಂಡ ಸತತ 3ನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್​ಗೇರಿದರೂ, ರೋಹಿತ್​ ಶರ್ಮ ಮುಂದಿನ ಡಬ್ಲ್ಯುಟಿಸಿ ಆವೃತ್ತಿಗೆ ಅಂದರೆ 2027ರವರೆಗೆ ಟೆಸ್ಟ್​ ತಂಡದ ನಾಯಕರಾಗಿ ಮುಂದುವರಿಯುವುದು ಅನುಮಾನವೆನಿಸಿದೆ. ಅದೇ ರೀತಿ ಆರ್​. ಅಶ್ವಿನ್​, ರವೀಂದ್ರ ಜಡೇಜಾ, ವಿರಾಟ್​ ಕೊಹ್ಲಿ ಕೂಡ ವೃತ್ತೀಜಿವನದ ಸಂಧ್ಯಾಕಾಲದತ್ತ ಸಾಗುತ್ತಿದ್ದಾರೆ. ಕಿವೀಸ್​ ವಿರುದ್ಧದ ತವರಿನ ಆಘಾತಕಾರಿ ಸೋಲಿನ ಬಳಿಕ ಭಾರತ ತಂಡದ ಹಿರಿಯ ಆಟಗಾರರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಮುಂದಿನ 2 ವರ್ಷಗಳಲ್ಲಿ ಮುಖ್ಯ ಕೋಚ್​ ಗೌತಮ್​ ಗಂಭೀರ್​ಗೆ ಭಾರತ ತಂಡದ ಸ್ಥಿತ್ಯಂತರವನ್ನು ನಿಭಾಯಿಸುವುದು ಕೂಡ ಪ್ರಮುಖ ಸವಾಲಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net