ಗಂಭೀರ್​ ಇನ್ನು ಕಟ್ಟುನಿಟ್ಟು! ಮುಂಬೈ ಟೆಸ್ಟ್​ಗೆ ಮುನ್ನ ಎಲ್ಲ ಆಟಗಾರರಿಗೂ 2 ದಿನ ಅಭ್ಯಾಸ ಕಡ್ಡಾಯ

web gam practice
Published on

ಮುಂಬೈ: ಭಾರತ ತಂಡ ಸತತ 2 ಟೆಸ್ಟ್​ ಸೋಲಿನೊಂದಿಗೆ ನ್ಯೂಜಿಲೆಂಡ್​ ಎದುರಿನ ಸರಣಿ ಕಳೆದುಕೊಂಡ ಬೆನ್ನಲ್ಲೇ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್​ 1ರಂದು ಆರಂಭಗೊಳ್ಳಲಿರುವ ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯಕ್ಕೆ ಮುನ್ನ ಅಕ್ಟೋಬರ್​ 30 ಮತ್ತು 31 ರಂದು ನಡೆಯಲಿರುವ ನೆಟ್ಸ್​ ಅಭ್ಯಾಸದಲ್ಲಿ ತಂಡದ ಎಲ್ಲ ಆಟಗಾರರು ಪಾಲ್ಗೊಳ್ಳುವುದು ಕಡ್ಡಾಯ ಎಂದು ಗಂಭೀರ್​ ಸೂಚಿಸಿದ್ದಾರೆ. ಯಾವ ಆಟಗಾರರಿಗೂ ಅಭ್ಯಾಸದಿಂದ ವಿನಾಯಿತಿ ನೀಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಭಾರತ ತಂಡದಲ್ಲಿ ಈ ಮುನ್ನ ಟೆಸ್ಟ್​ ಪಂದ್ಯಗಳಿಗೆ ಮುನ್ನಾದಿನದ ಅಭ್ಯಾಸಕ್ಕೆ ಹಾಜರಾಗುವುದು ಆಟಗಾರರಿಗೆ ಐಚ್ಛಿಕ ಆಯ್ಕೆ ಆಗಿತ್ತು. ಆದರೆ ಕಿವೀಸ್​ ವಿರುದ್ಧದ ಆಘಾತಕಾರಿ ಸೋಲಿನ ಬಳಿಕ ತಂಡದ ಆಟಗಾರರಿಗೆ ಹೆಚ್ಚಿನ ಅಭ್ಯಾಸದ ಅಗತ್ಯವಿರುವುದನ್ನು ಟೀಮ್​ ಮ್ಯಾನೇಜ್​ಮೆಂಟ್​ ಮನಗಂಡಿದೆ ಎನ್ನಲಾಗಿದೆ.

ಸಾಮಾನ್ಯವಾಗಿ ಐಚ್ಛಿಕ ಅಭ್ಯಾಸವನ್ನು ವೇಗಿಗಳು ಮತ್ತು ತಂಡದ ಅಗ್ರ ಆಟಗಾರರು ತಪ್ಪಿಸಿಕೊಳ್ಳುತ್ತಾರೆ ಅಥವಾ ಲು ಅಭ್ಯಾಸವನ್ನಷ್ಟೇ ಮಾಡುತ್ತಾರೆ. ಕಾರ್ಯದೊತ್ತಡ ತಗ್ಗಿಸುವ ಸಲುವಾಗಿ ಆಟಗಾರರಿಗೆ ಈ ರೀತಿ ವಿರಾಮಕ್ಕೆ ಅವಕಾಶ ಕಲ್ಪಿಸಲಾಗುತಿತ್ತು.

ಆದರೆ ಈಗ ಭಾರತ ತವರಿನಲ್ಲೇ ವೈಟ್​ವಾಷ್​ ಮುಖಭಂಗ ಎದುರಾಗುವುದನ್ನು ತಪ್ಪಿಸಲು ಮುಂಬೈನಲ್ಲಿ ಸುಧಾರಿತ ನಿರ್ವಹಣೆ ತೋರಬೇಕಾಗಿದೆ. ಅಲ್ಲದೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ ಸತತ 3ನೇ ಬಾರಿ ಫೈನಲ್​ಗೇರುವ ಆಸೆಯನ್ನು ಜೀವಂತವಿರಿಸಲು ಭಾರತಕ್ಕೆ ಗೆಲುವಿನ ಅನಿವಾರ್ಯತೆ ಇದೆ.

ಪುಣೆ ಟೆಸ್ಟ್​ ಮುಗಿದ ಬೆನ್ನಲ್ಲೇ ಶನಿವಾರವೇ ನಾಯಕ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಮುಂಬೈಗೆ ಪ್ರಯಾಣಿಸಿದ್ದು, 2 ದಿನಗಳ ಕಾಲ ಕುಟುಂಬದೊಂದಿಗೆ ಕಾಲ ಕಳೆಯಲಿದ್ದಾರೆ. ಭಾರತ ತಂಡದ ಇತರ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಭಾನುವಾರ ಮುಂಬೈ ತಲುಪಿದ್ದು, ಇನ್ನು 2 ದಿನಗಳ ವಿಶ್ರಾಂತಿಯ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net