

ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 233 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಸಂಭ್ರಮದ ನಡುವೆಯೇ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತ ಬೆಳವಣಿಗೆಯೊಂದು ನಡೆದಿದ್ದು, ತಂಡದ ಮೂವರು ಮಾಜಿ ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್ (Match Fixing) ಆರೋಪದ ಮೇಲೆ ಬಂಧಿಸಲಾಗಿದೆ.
ಬಂಧಿತರನ್ನು ಲೊನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಎಂದು ಗುರುತಿಸಲಾಗಿದ್ದು, 2016ರಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ (Match Fixing) ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಅಪರಾಧ ತನಿಖಾ ವಿಭಾಗವು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.
2016ರಲ್ಲಿ ನಡೆದಿದ್ದ ರಾಮ್ ಸ್ಲಾಮ್’ ಟಿ20 ಟೂರ್ನಿಯಲ್ಲಿ ನಡೆದಿದ್ದ ಮ್ಯಾಚ್ ಫಿಕ್ಸಿಂಗ್ಗೆ ಸಂಬಂಧಿಸಿದಂತೆ ಈ ಮೂವರು ಆಟಗಾರರ ವಿರುದ್ಧ ಆರೋಪ ಕೇಳಿ ಬಂದಿತ್ತು. ಆ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ಮೂವರು ಆಟಗಾರರನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಪ್ರಕರಣದ ತನಿಖೆ ನಡೆಸುತ್ತಿರುವ ದಕ್ಷಿಣ ಆಫ್ರಿಕಾದ ಅಪರಾಧ ತನಿಖಾ ನಿರ್ದೇಶನಾಲಯ (DPCI) ಮೂವರು ಮಾಜಿ ಆಟಗಾರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದೆ.
2004 ರ ಭ್ರಷ್ಟಾಚಾರ ಚಟುವಟಿಕೆಗಳ ತಡೆಗಟ್ಟುವಿಕೆ ಮತ್ತು ಹೋರಾಟ ಕಾಯ್ದೆ ಸೆಕ್ಷನ್ 15ರ ಅಡಿಯಲ್ಲಿ ಈ ಮೂವರು ಮಾಜಿ ಆಟಗಾರರನ್ನು ಬಂಧಿಸಲಾಗಿದ್ದು, ಇವರ ವಿರುದ್ಧದ ಕಾನೂನು ಪ್ರಕ್ರಿಯೆಗಳನ್ನು ಫೆಬ್ರವರಿ 2025 ರವರೆಗೆ ಮುಂದೂಡಲಾಗಿದೆ. ಸದ್ಯ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.