ಐಪಿಎಲ್​ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಆಡುವುದು ಖಚಿತ

ipl-sa
Published on

ನವದೆಹಲಿ: ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದಿಂದಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಐಪಿಎಲ್​ 13ನೇ ಆವೃತ್ತಿಗೆ ಲಭ್ಯರಾಗುವ ಬಗ್ಗೆ ಈ ಹಿಂದೆ ಅನುಮಾನಗಳು ಮೂಡಿದ್ದವು. ಆದರೆ ದಕ್ಷಿಣ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್​ ಟೂರ್ನಿಗೆ ಸಂಪೂರ್ಣವಾಗಿ ಲಭ್ಯರಾಗುವುದು ಇದೀಗ ಖಚಿತಗೊಂಡಿದೆ.

ದಕ್ಷಿಣ ಆಫ್ರಿಕಾ ಸರ್ಕಾರ ಈ ತಿಂಗಳು ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಯುಎಇಯಲ್ಲಿ ಐಪಿಎಲ್​ ಟೂರ್ನಿಗೆ ಹಾಜರಾಗಲು ಅವಕಾಶ ಲಭಿಸಿದಂತಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರರಾದ ಫಾಫ್​ ಡು ಪ್ಲೆಸಿಸ್​ ಮತ್ತು ಲುಂಗಿ ಎನ್​ಗಿಡಿ ಅವರು ಸೆಪ್ಟೆಂಬರ್​ 1ರಂದು ದುಬೈನಲ್ಲಿ ತಂಡ ಸೇರಿಕೊಳ್ಳಲಿರುವುದನ್ನು ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ ಖಚಿತಪಡಿಸಿದೆ.

ದಕ್ಷಿಣ ಆಫ್ರಿಕಾದ ಒಟ್ಟು 10 ಆಟಗಾರರು ಐಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪೈಕಿ ಇಮ್ರಾನ್​ ತಾಹಿರ್​ ಅವರು ಐಪಿಎಲ್​ಗೆ ಮುನ್ನ ವೆಸ್ಟ್​ ಇಂಡೀಸ್​ನಲ್ಲಿ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡಲಿದ್ದಾರೆ. ಚೆನ್ನೈ ಸೂಪರ್​ಕಿಂಗ್ಸ್​ ಪರ ಕಣಕ್ಕಿಳಿಯಬೇಕಿರುವ ಅವರು ಕೂಡ ಐಪಿಎಲ್​ ಟೂರ್ನಿಗೆ ಮುನ್ನ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.

'ನಾವು ದಕ್ಷಿಣ ಆಫ್ರಿಕಾದ ಆಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಸರ್ಕಾರ ಅವರ ಪ್ರಯಾಣಕ್ಕೆ ಅನುಮತಿ ನೀಡಿರುವ ಬಗ್ಗೆ ಅವರಿಂದ ಮಾಹಿತಿ ಲಭಿಸಿದೆ. ಸದ್ಯ ದಕ್ಷಿಣ ಆಫ್ರಿಕಾ ಆಟಗಾರರು ಲಾಜಿಸ್ಟಿಕ್ಸ್​ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಸೆಪ್ಟೆಂಬರ್​ ವೇಳೆಗೆ ಅವರು ದುಬೈನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ' ಎಂದು ಚೆನ್ನೈ ಸೂಪರ್​ಕಿಂಗ್ಸ್​ ಫ್ರಾಂಚೈಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ ಕೂಡ ತನ್ನ ಕಡೆಯಿಂದ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಿರುವುದನ್ನು ಖಚಿತಪಡಿಸಿದೆ.

ಐಪಿಎಲ್​ನಲ್ಲಿ ಆಡಲಿರುವ ದಕ್ಷಿಣ ಆಫ್ರಿಕಾದ 10 ಆಟಗಾರರ ಪೈಕಿ 6 ಆಟಗಾರರು ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಆರ್​ಸಿಬಿ ತಂಡಗಳಿಗೆ ಸೇರಿದವರಾಗಿದ್ದಾರೆ. ಎಬಿಡಿ ವಿಲಿಯರ್ಸ್‌ ಆರ್‌ಸಿಬಿ ತಂಡದ ಆಧಾರಸ್ತಂಭವಾಗಿದ್ದರೆ, ಕ್ರಿಸ್ ಮಾರಿಸ್, ಡೇಲ್ ಸ್ಟೇನ್ ಆರ್‌ಸಿಬಿ ತಂಡದಲ್ಲಿದ್ದಾರೆ. ಫಾಫ್ ಡು ಪ್ಲೆಸಿಸ್, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹಿರ್ ಸಿಎಸ್‌ಕೆ ಪರ ಆಡುತ್ತಿದ್ದರೆ, ವೇಗಿ ಕಗಿಸೊ ರಬಾಡ (ಡೆಲ್ಲಿ), ಕ್ವಿಂಟನ್ ಡಿ ಕಾಕ್ (ಮುಂಬೈ), ಡೇವಿಡ್ ಮಿಲ್ಲರ್ (ರಾಜಸ್ಥಾನ), ಹರ್ದೂಸ್ ವಿಲ್‌ಜಿಯೊನ್ (ಪಂಜಾಬ್) ಐಪಿಎಲ್‌ನಲ್ಲಿ ಕಣಕ್ಕಿಳಿಯಬೇಕಿರುವ ದ.ಆಫ್ರಿಕಾ ಆಟಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net