

ಚಟ್ಟೋಗ್ರಾಮ್: ಬೌಲರ್ಗಳ ಅಮೋಘ ದಾಳಿಯ ಬಲದಿಂದ ದಕ್ಷಿಣ ಆಫ್ರಿಕಾ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ವಿರುದ್ಧ ಇನಿಂಗ್ಸ್ ಮತ್ತು 273 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಹರಿಣಗಳಿಗೆ ಏಷ್ಯಾದಲ್ಲಿ ಇದು ದಶಕದ ಬಳಿಕ ಒಲಿದ ಟೆಸ್ಟ್ ಸರಣಿ ಗೆಲುವಾಗಿದೆ. ಅಲ್ಲದೆ 2008ರ ಬಳಿಕ ಮೊದಲ ಬಾರಿಗೆ ಏಷ್ಯಾದಲ್ಲಿ ಸರಣಿ ಕ್ಲೀನ್ಸ್ವೀಪ್ ಸಾಧಿಸಿರುವ ದ. ಆಫ್ರಿಕಾ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ದ. ಆಫ್ರಿಕಾ ಇನ್ನು ಡಬ್ಲ್ಯುಟಿಸಿ ಫೈನಲ್ಗೇರಬೇಕಾದರೆ, ತವರಿನಲ್ಲಿ ಆಡಲಿರುವ ಕೊನೇ 4 ಟೆಸ್ಟ್ಗಳಲ್ಲಿ 3ರಲ್ಲಿ ಗೆದ್ದರೂ ಸಾಕಾಗುತ್ತದೆ.
ಮೂರನೇ ದಿನವಾದ ಗುರುವಾರ ಬೆಳಗ್ಗೆ 4 ವಿಕೆಟ್ಗೆ 38 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ, ವೇಗಿ ಕಗಿಸೊ ರಬಾಡ (37ಕ್ಕೆ 5) ದಾಳಿಗೆ ಕುಸಿದು ಭೋಜನ ವಿರಾಮದ ಬಳಿಕ 159 ರನ್ಗಳಿಗೆ ಆಲೌಟ್ ಆಯಿತು. 416 ರನ್ ಹಿನ್ನಡೆಯೊಂದಿಗೆ ಫಾಲೋಆನ್ಗೆ ಗುರಿಯಾದ ಬಾಂಗ್ಲಾ, 2ನೇ ಇನಿಂಗ್ಸ್ನಲ್ಲಿ ಸ್ಪಿನ್ನರ್ಗಳಾದ ಕೇಶವ್ ಮಹಾರಾಜ್ (59ಕ್ಕೆ 5) ಮತ್ತು ಸೆನುರನ್ ಮುತ್ತುಸ್ವಾಮಿ (45ಕ್ಕೆ 4) ದಾಳಿಗೆ ಕುಸಿದು 143 ರನ್ಗಳಿಗೆ ಸರ್ವಪತನ ಕಂಡು ಶರಣಾಯಿತು. ಈ ಮೂಲಕ ದ. ಆಫ್ರಿಕಾ ಎದುರು ತನ್ನ ಇದುವರೆಗಿನ ಅತಿದೊಡ್ಡ ಸೋಲು ಅನುಭವಿಸಿತು.
ದಕ್ಷಿಣ ಆಫ್ರಿಕಾ: 6 ವಿಕೆಟ್ಗೆ 575 ಡಿಕ್ಲೇರ್, ಬಾಂಗ್ಲಾದೇಶ: 45.2 ಓವರ್ಗಳಲ್ಲಿ 159 (ಮಾಮಿನುಲ್ ಹಕ್ 82, ಶಾಂಟೊ 9, ತೈಜುಲ್ 30, ರಬಾಡ 37ಕ್ಕೆ 5, ಡೇನ್ ಪೀಟರ್ಸನ್ 31ಕ್ಕೆ 2, ಮಹಾರಾಜ್ 57ಕ್ಕೆ 2) ಮತ್ತು 43.4 ಓವರ್ಗಳಲ್ಲಿ 143 (ಶಾದ್ಮನ್ 6, ಮಾಮಿನುಲ್ 0, ಶಾಂಟೊ 36, ಮಹಿದುಲ್ 29, ಹಸನ್ ಮಹ್ಮುದ್ 38*, ಮಹಾರಾಜ್ 59ಕ್ಕೆ 5, ಸೆನುರನ್ ಮುತ್ತುಸ್ವಾಮಿ 45ಕ್ಕೆ 4), ಪಂದ್ಯಶ್ರೇಷ್ಠ: ಟೋನಿ ಡಿ ಜಾರ್ಜಿ, ಸರಣಿಶ್ರೇಷ್ಠ: ಕಗಿಸೊ ರಬಾಡ.