ಟೀಮ್​ ಇಂಡಿಯಾ ಗೆದ್ದಿದ್ದು ಮೋಸದಿಂದ; ಸೂರ್ಯ ಹಿಡಿದ ಕ್ಯಾಚ್​ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ದಕ್ಷಿಣ ಆಫ್ರಿಕಾದ ಸ್ಟಾರ್​ ಪ್ಲೇಯರ್​

Suryakumar Yadav
Published on

ನವದೆಹಲಿ: ಜೂನ್​ 29ರಂದು ಮುಕ್ತಾಯಗೊಂಡ 09ನೇ 09ನೇ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 07 ರನ್​ಗಳ ಜಯ ಸಾಧಿಸಿ ಚುಟುಕು ವಿಶ್ವಸಮರದಲ್ಲಿ ಎರಡನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಟೀಮ್​ ಇಂಡಿಯಾ ಯಶಸ್ಸಿನಲ್ಲಿ ಬೌಲರ್​ಗಳೊಂದಿಗೆ ಸೂರ್ಯಕುಮಾರ್​ ಯಾದವ್​ ಬೌಂಡರಿ ಲೈನ್​ನಲ್ಲಿ ಹಿಡಿದ ಆ ಕ್ಯಾಚ್​ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಕ್ಯಾಚ್​ನ ಸುತ್ತ ವಿವಾದ ಸುತ್ತುಕೊಂಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ರೋಹಿತ್​ ಶರ್ಮಾ ವಿರಾಟ್​ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್​ ಪಟೇಲ್​ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್​ ನೀಡಿದ ಭಾರತದ ಬೌಲರ್​ಗಳು ದಿಟ್ಟ ಪ್ರತಿರೋಧ ತೋರಿದರು. ಈ ವೇಳೆ ಅಪಾಯಕಾರಿಯಾಗಿದ್ದ ಹೆನ್ರಿಚ್​ ಕ್ಲಾಸೆನ್​ಗೆ​ (52 ರನ್, 27 ಎಸೆತ, 2 ಬೌಂಡರಿ, 5 ಸಿಕ್ಸರ್) ಹಾರ್ದಿಕ್​ ಪಾಂಡ್ಯ ಡಗೌಟ್​ ದಾರಿ ತೋರಿಸಿದರು.

ವಾಸ್ತವವಾಗಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಯಾವುದೇ ತಪ್ಪು ಮಾಡದೆ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಹಿಡಿಯುವಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ತಪ್ಪು ಮಾಡಿದ್ದರೆ ವಿಶ್ವಕಪ್ ಕನಸು ಭಗ್ನವಾಗುತ್ತಿತ್ತು. ಸೂರ್ಯ ಅವರ ಈ ಅದ್ಬುತ ಫೀಲ್ಡಿಂಗ್‌ಗೆ ದೇಶದ ಕ್ರಿಕೆಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಈ ಕ್ಯಾಚ್​ನ ಸುತ್ತ ವಿವಾದದ ಹುತ್ತವೇ ನಿರ್ಮಾಣವಾಗಿದ್ದು, ಪಂದ್ಯ ಮುಗಿದು ಭಾರತ ತಂಡ ಕಪ್​ ಗೆದ್ದು ಸಂಭ್ರಮಾಚರಿಸಿ ಎರಡು ತಿಂಗಳಾಗುತ್ತ ಬಂದರೂ ಈ ಬಗ್ಗೆ ಇನ್ನೂ ಚರ್ಚೆ ನಿಂತಿಲ್ಲ. ಇದೀಗ ಈ ಕ್ಯಾಚ್​ನ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ಸ್ಟಾರ್​ ಆಟಗಾರ ತರ್ಬೇಜ್​ ಶಂಸಿ ಮಾತನಾಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ತರ್ಬ್ರೇಜ್​ ಶಂಸಿ ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ವಿಶ್ವಕಪ್ ಫೈನಲ್‌ನಲ್ಲಿ ಕ್ಯಾಚ್ ಅನ್ನು ಪರಿಶೀಲಿಸಲು ಅವರು ಈ ವಿಧಾನವನ್ನು ಬಳಸಿದರೆ ಬಹುಶಃ ಅದು ನಾಟೌಟ್ ಆಗಿರುತಿತ್ತು ಎಂದು ಬರೆದುಕೊಂಡಿದ್ದಾರೆ.  ನಮಗೆ ಮೋಸ ಆಗಿದೆ. ಭಾರತ ಮೋಸದಿಂದ ಪಂದ್ಯ ಗೆದ್ದಿದೆ ಎಂದಿದ್ದಾರೆ. ಈ ಪೋಸ್ಟ್​ ಇದೀಗ ವಿವಾದವನ್ನು ಸೃಷ್ಟಿಸಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಇದು ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net