

ಚೆನ್ನೈ: ಪಾಕಿಸ್ತಾನ ತಂಡ ಬೌಲಿಂಗ್ನಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ನಡುವೆಯೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 4ನೇ ಸೋಲು ಅನುಭವಿಸಿದ್ದು, ಸೆಮಿಫೈನಲ್ ಆಸೆಯನ್ನು ಬಹುತೇಕ ಕೈಚೆಲ್ಲಿದೆ. ಬಿಗಿ ಬೌಲಿಂಗ್ ದಾಳಿಯ ಬಳಿಕ ಏಡನ್ ಮಾರ್ಕ್ರಮ್ (91 ರನ್, 93 ಎಸೆತ, 7 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ನಿರ್ವಹಣೆ ಮತ್ತು ಬಾಲಂಗೋಚಿಗಳ ಪರಿಶ್ರಮದಿಂದ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ 1 ವಿಕೆಟ್ನಿಂದ ರೋಚಕ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಕಂಡ 5ನೇ ಗೆಲುವಿನ ಬಲದಿಂದ ಟೆಂಬಾ ಬವುಮಾ ಪಡೆ ಉಪಾಂತ್ಯಕ್ಕೇರುವ ಅವಕಾಶ ವೃದ್ಧಿಸಿಕೊಂಡಿದೆ.
ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಹಾಲಿ ವಿಶ್ವಕಪ್ನ 5ನೇ ಹಾಗೂ ಕೊನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ತಂಡ ಮಧ್ಯಮ ಕ್ರಮಾಂಕದ ಉಪಯುಕ್ತ ಆಟದ ನಡುವೆಯೂ ಅಗ್ರ ಮತ್ತು ಕೆಳ ಸರದಿಯ ಕುಸಿತದಿಂದಾಗಿ 46.4 ಓವರ್ಗಳಲ್ಲಿ 270 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ದಿಟ್ಟ ಚೇಸಿಂಗ್ನತ್ತ ಮುನ್ನಡೆದರೂ, ವೇಗಿ ಶಹೀನ್ ಷಾ ಅಫ್ರಿದಿ (45ಕ್ಕೆ 3) ದಾಳಿಗೆ ಮಧ್ಯಮ ಕ್ರಮಾಂಕ ಕುಸಿಯಿತು. ಆದರೂ ಬಾಲಂಗೋಚಿಗಳಾದ ಕೇಶವ್ ಮಹಾರಾಜ್ (7*) ಮತ್ತು ತಜರೇಜ್ ಶಮ್ಸಿ (4*) ಹೋರಾಟದಿಂದ 47.2 ಓವರ್ಗಳಲ್ಲಿ 9 ವಿಕೆಟ್ಗೆ 271 ರನ್ ಪೇರಿಸಿ ಜಯಿಸಿತು.
ಮಾರ್ಕ್ರಮ್ ದಿಟ್ಟ ಹೋರಾಟ: ಕ್ವಿಂಟನ್ ಡಿಕಾಕ್ (24) ಹರಿಣಗಳ ಚೇಸಿಂಗ್ಗೆ ಬಿರುಸಿನ ಆರಂಭ ಒದಗಿಸಿ ನಿರ್ಗಮಿಸಿದರೆ, ನಾಯಕ ಟೆಂಬಾ ಬವುಮಾ (28) ಮತ್ತು ರಸೀ ವಾನ್ ಡರ್ ಡುಸೆನ್ (21) ಉಪಯುಕ್ತ ಕೊಡುಗೆ ನೀಡಿದರು. ಬಳಿಕ ಏಡನ್ ಮಾರ್ಕ್ರಮ್ ಹರಿಣಗಳಿಗೆ ಆಸರೆಯಾಗಿ ನಿಂತರು. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ (12) ಬೇಗನೆ ಔಟಾದರೆ, ಡೇವಿಡ್ ಮಿಲ್ಲರ್ (29) ಜತೆಗೂಡಿ 5ನೇ ವಿಕೆಟ್ಗೆ 69 ಎಸೆತಗಳಲ್ಲಿ 70 ರನ್ ಸೇರಿಸುವ ಮೂಲಕ ಮಾರ್ಕ್ರಮ್ ಚೇಸಿಂಗ್ಗೆ ಬಲ ತುಂಬಿದರು. ಆದರೆ ಗೆಲುವಿನಿಂದ 21 ರನ್ ದೂರವಿದ್ದಾಗ ಔಟಾದ ಮಾರ್ಕ್ರಮ್ ಶತಕವಂಚಿತರಾಗಿದ್ದಲ್ಲದೆ, ನಂತರದಲ್ಲಿ ಗೆಲುವಿನ ದಡ ಸೇರಲು ಹರಿಣಗಳು ಪರದಾಡುವಂತಾಯಿತು. ಗೆರಾಲ್ಡ್ ಕೋಟ್ಜೀ (10) ಮತ್ತು ಲುಂಗಿ ಎನ್ಗಿಡಿ (4) ಔಟಾದಾಗ ಆಫ್ರಿಕಾ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ಆಗ ಮುರಿಯದ ಕೊನೇ ವಿಕೆಟ್ಗೆ 11 ರನ್ ಜತೆಯಾಟವಾಡಿದ ಕೇಶವ್ ಮಹಾರಾಜ್&ತಬರೇಜ್ ಶಮ್ಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಪಾಕಿಸ್ತಾನ: 46.4 ಓವರ್ಗಳಲ್ಲಿ 270 (ಶಫೀಕ್ 9, ಇಮಾಮ್ 12, ಬಾಬರ್ 50, ರಿಜ್ವಾನ್ 31, ಇಫ್ತಿಕಾರ್ 21, ಶಕೀಲ್ 52, ಶಾದಾಬ್ 43, ನವಾಜ್ 24, ಶಮ್ಸಿ 60ಕ್ಕೆ 4, ಕೋಟ್ಜೀ 42ಕ್ಕೆ 2, ಜಾನ್ಸೆನ್ 43ಕ್ಕೆ 3). ದಕ್ಷಿಣ ಆಫ್ರಿಕಾ: 47.2 ಓವರ್ಗಳಲ್ಲಿ 9 ವಿಕೆಟ್ಗೆ 271 (ಡಿಕಾಕ್ 24, ಬವುಮಾ 21, ಮಾರ್ಕ್ರಮ್ 91, ಕ್ಲಾಸೆನ್ 12, ಮಿಲ್ಲರ್ 29, ಜಾನ್ಸೆನ್ 20, ಕೋಟ್ಜೀ 10, ಅಫ್ರಿದಿ 45ಕ್ಕೆ 3, ವಾಸಿಂ 50ಕ್ಕೆ 2, ಉಸಾಮ ಮಿರ್ 45ಕ್ಕೆ 2, ರೌಫ್ 62ಕ್ಕೆ 2).