

ಕೋಲ್ಕತ: ಭಾರತ ತಂಡದ 2011ರ ವಿಶ್ವಕಪ್ ಗೆಲುವಿನಲ್ಲಿ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಅವರ ಕೊಡುಗೆ ಮಹತ್ವದ್ದು ಎಂದು ಚರ್ಚಿಸಲಾಗುತ್ತದೆ. ಆದರೆ, ಆ ತಂಡದಲ್ಲಿರದಿದ್ದ ಮಾಜಿ ನಾಯಕ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಕೂಡ 2011ರ ವಿಶ್ವಕಪ್ ಗೆಲುವಿಗೆ ಕೊಡುಗೆ ನೀಡಿದ್ದಾರೆಂಬುದು ನಿಮಗೆ ಗೊತ್ತಿದೆಯೇ? ಸ್ವತಃ ಗಂಗೂಲಿಯೇ ಹೇಳಿಕೊಂಡಿರುವ ಪ್ರಕಾರ, 2011ರ ವಿಶ್ವಕಪ್ ವಿಜೇತ ತಂಡದಲ್ಲಿದ್ದ 7 ಆಟಗಾರರು ಅವರ ನಾಯತ್ವದಡಿಯಲ್ಲೇ ಪದಾರ್ಪಣೆಯ ಅವಕಾಶ ಪಡೆದುಕೊಂಡಿದ್ದರು. ಅಲ್ಲಿಂದಲೇ ವಿಶ್ವ ಚಾಂಪಿಯನ್ ತಂಡವನ್ನು ಕಟ್ಟುವ ಕೆಲಸ ಆರಂಭವಾಗಿತ್ತು.
‘2011ರ ವಿಶ್ವಕಪ್ ಗೆಲುವು ನನ್ನ ಮಟ್ಟಿಗೆ ಅತಿ ಶ್ರೇಷ್ಠ ದಿನ. ಧೋನಿ ಸಿಕ್ಸರ್ ಸಿಡಿಸುವ ಮೂಲಕ ವಿಶ್ವಕಪ್ ತಂದುಕೊಟ್ಟ ಕ್ಷಣ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತವಾಗಿರಲಿದೆ. ಈ ವಿಶ್ವ ವಿಜೇತ ತಂಡದ 7 ಆಟಗಾರರು ನನ್ನ ನಾಯಕತ್ವದ ಸಮಯದಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಎಂಎಸ್ ಧೋನಿ, ಜಹೀರ್ ಖಾನ್, ಹರ್ಭಜನ್ ಸಿಂಗ್, ಆಶಿಶ್ ನೆಹ್ರಾ ಮುಂತಾದವರು. ನನ್ನ ನಾಯಕತ್ವದ ಸಮಯದಲ್ಲಿ ತವರು ಮತ್ತು ವಿದೇಶದಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯವನ್ನು ತಂಡದಲ್ಲಿ ತುಂಬಿದ್ದೆ’ ಎಂದು ಗಂಗೂಲಿ ಆನ್‌ಲೈನ್ ಉಪನ್ಯಾಸವೊಂದರಲ್ಲಿ ಹೇಳಿಕೊಂಡಿದ್ದಾರೆ. ಫೈನಲ್ ಪಂದ್ಯದ ಗರಿಷ್ಠ ಸ್ಕೋರರ್ ಗೌತಮ್ ಗಂಭೀರ್ ಕೂಡ ಗಂಗೂಲಿ ನಾಯಕತ್ವದಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
‘2011ರ ವಿಶ್ವಕಪ್ ಫೈನಲ್ ಪಂದ್ಯದ ಗೆಲುವಿನ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ನಾನು ಕಾಮೆಂಟರಿ ಬಾಕ್ಸ್‌ನಿಂದ ಧೋನಿ ಮತ್ತು ತಂಡವನ್ನು ಭೇಟಿಯಾಗಲು ಹೋಗಿದ್ದೆ. 2003ರ ವಿಶ್ವಕಪ್ ಫೈನಲ್‌ನಲ್ಲಿ ನನ್ನ ನಾಯಕತ್ವದ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದರೆ ಧೋನಿಗೆ ವಿಶ್ವಕಪ್ ಎತ್ತಿಹಿಡಿಯುವ ಅದೃಷ್ಟ ದೊರೆತ ಬಗ್ಗೆ ಖುಷಿಪಟ್ಟಿದ್ದೆ’ ಎಂದು ಗಂಗೂಲಿ ವಿವರಿಸಿದ್ದಾರೆ.