ವೀನಸ್‌ಗೆ 40ರ ಹರೆಯದಲೂ ಬಿಡದ ಗ್ರಾಂಡ್ ಸ್ಲಾಂ ಗೆಲುವಿನ ಕನಸು

venus williams_web
Published on

ನ್ಯೂಯಾರ್ಕ್: ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಅಂತಾರೆ, ಜತೆಗೆ ವಯಸ್ಸು ಕೇವಲ ನಂಬರ್ ಅಷ್ಟೇ, ಕನಸುಗಳೊಂದಿಗೆ ರಾಜಿ ಯಾಕೆ ಎನ್ನುತ್ತಾರೆ ಅಮೆರಿಕದ ಸ್ಟಾರ್ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್. ಬುಧವಾರ 40ನೇ ವರ್ಷಕ್ಕೆ ಕಾಲಿಟ್ಟ ವೀನಸ್ ವಿಲಿಯಮ್ಸ್‌ಗೆ ಕನಿಷ್ಠ ಎರಡು ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಆಸೆ ಇದೆಯಂತೆ. 7 ಗ್ರಾಂಡ್ ಸ್ಲಾಂ ಒಡತಿಯಾಗಿರುವ ವೀನಸ್ ಇದುವರೆಗೂ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್ ಜಯಿಸಿಲ್ಲ. ಈ ಎರಡು ಪ್ರಶಸ್ತಿಗಳನ್ನು ಗೆದ್ದರೆ ಗೋಲ್ಡನ್ ಸ್ಲಾಂ ಗೆದ್ದಷ್ಟೇ ಖುಷಿಯಾಗುತ್ತದೆ ಎಂದಿದ್ದಾರೆ.

ರಾಕೆಟ್ ನನ್ನ ಕೈಯಲ್ಲಿ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ, ಮುಂಬರುವ ಫ್ರೆಂಚ್ ಹಾಗೂ ಆಸ್ಟ್ರೇಲಿಯಾ ಓಪನ್ ಗ್ರಾಂಡ್ ಸ್ಲಾಂ ಸವಾಲಿಗೆ ಸನ್ನದ್ಧವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ನಿವೃತ್ತಿ ಸುದ್ದಿಗಳಿಗೆ ಬ್ರೇಕ್ ಹಾಕಿದರು. ವೀನಸ್ ವಿಲಿಯಮ್ಸ್ 23 ಗ್ರಾಂಡ್ ಸ್ಲಾಂಗಳ ಒಡತಿ ಸೆರೇನಾ ವಿಲಿಯಮ್ಸ್ ಸಹೋದರಿ. ವಿಶ್ವ ಟೆನಿಸ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದರೂ ವೃತ್ತಿ ಜೀವನದಲ್ಲಿ ಗೆದ್ದಿರುವ 7 ಗ್ರಾಂಡ್ ಸ್ಲಾಂಗಳ ಪೈಕಿ 5 ಬಾರಿ ವಿಂಬಲ್ಡನ್ ಹಾಗೂ 2 ಯುಎಸ್ ಓಪನ್ ಒಳಗೊಂಡಿವೆ. ಇದೀಗ ತಮ್ಮ 40ನೇ ವಯಸ್ಸಿನಲೂ ಗ್ರಾಂಡ್ ಸ್ಲಾಂ ಗೆಲುವಿನ ಕನಸು ಬಿಚ್ಚಿಟ್ಟಿದ್ದಾರೆ. ಟೆನಿಸ್ ರಂಗದಲ್ಲಿ ಉತ್ತುಂಗವನ್ನು ನೋಡಿದ್ದೇನೆ, ಪಾತಾಳಕ್ಕೂ ಕುಸಿದಿದ್ದೇನೆ, ಇದುವರೆಗೂ ಸಾಧಿಸಿರುವ ಸಾಧನೆ ಬಗ್ಗೆ ತೃಪ್ತಿಯಂತು ಇದೆ ಎಂದು ಹೇಳಿಕೊಂಡಿದ್ದಾರೆ.

1994ರಲ್ಲಿ ಅಂತಾರಾಷ್ಟ್ರೀಯ ಟೆನಿಸ್‌ಗೆ ಪದಾರ್ಪಣೆ ಮಾಡಿದ ವೀನಸ್, 26 ವರ್ಷಗಳಿಂದ ಇದುವರೆಗೂ ಸಿಂಗಲ್ಸ್ ವಿಭಾಗದಲ್ಲಿ 7 ಗ್ರಾಂಡ್ ಸ್ಲಾಂ, 4 ಒಲಿಂಪಿಕ್ಸ್ ಸ್ವರ್ಣ, ಡಜನ್‌ಗಟ್ಟಲೇ ಇತರ ಟೂರ್ನಿಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. 2016ರಲ್ಲಿ ಕಡೇ ಬಾರಿಗೆ ಡಬ್ಲ್ಯುಟಿಎ ಟೂರ್ ವಿಭಾಗದಲ್ಲಿ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದರು. 2008ರ ವಿಂಬಲ್ಡನ್ ಕಡೇ ಬಾರಿಗೆ ಗ್ರಾಂಡ್ ಸ್ಲಾಂ ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net