ಇಂದು ಇಂಗ್ಲೆಂಡ್-ಆಸ್ಟ್ರೇಲಿಯಾ ನಿರ್ಣಾಯಕ ಏಕದಿನ ಪಂದ್ಯ

eng aus
Published on

ಮ್ಯಾಂಚೆಸ್ಟರ್: ಐಪಿಎಲ್ ತಂಡಗಳನ್ನು ಕೂಡಿಕೊಳ್ಳಲು ಯುಎಇಗೆ ಪ್ರಯಾಣ ಬೆಳೆಸುವುದಕ್ಕೆ ಮುನ್ನ ಇಂಗ್ಲೆಂಡ್ ಮತ್ತು ಪ್ರವಾಸಿ ಆಸ್ಟ್ರೇಲಿಯಾ ತಂಡಗಳು ಕೊನೆಯದಾಗಿ ಬುಧವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಿರ್ಣಾಯಕ ಹೋರಾಟ ನಡೆಸಲಿವೆ. 1-1ರಿಂದ ಸಮಬಲದಲ್ಲಿರುವ ಸರಣಿಯಲ್ಲಿ ಅಂತಿಮ ಪಂದ್ಯ ಜಯಿಸುವ ತಂಡ ಪ್ರಶಸ್ತಿ ಒಲಿಸಿಕೊಳ್ಳಲಿದೆ.

ಕರೊನಾ ಕಾಲದಲ್ಲಿ ಬಯೋಬಬಲ್‌ನಲ್ಲಿ ಇರುವರೆಗೆ ಆಡಿರುವ 5 ಸರಣಿಗಳ ಪೈಕಿ 4ರಲ್ಲಿ ಗೆದ್ದು, 1ರಲ್ಲಿ ಸಮಬಲ ಸಾಧಿಸಿರುವ ಇಂಗ್ಲೆಂಡ್ ತಂಡ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಕರೊನಾ ಕಾಲದ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

ಕನ್‌ಕಷನ್‌ನಿಂದಾಗಿ (ಮೆದುಳು ಗಾಯ) ಸರಣಿಯ ಮೊದಲೆರಡು ಏಕದಿನ ಪಂದ್ಯಗಳಿಂದ ಹೊರುಗಳಿದಿದ್ದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಈ ನಿರ್ಣಾಯಕ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸಲು ಹೊರಡುವ ಮುನ್ನ ಬ್ಯಾಟಿಂಗ್ ಲಯ ಕಂಡುಕೊಳ್ಳುವುದು ಸ್ಮಿತ್ ಹಂಬಲವಾಗಿದೆ. ಅವರು ಅಭ್ಯಾಸದ ವೇಳೆ ಥ್ರೋಡೌನ್ ಎದುರಿಸುತ್ತಿದ್ದಾಗ ತಲೆಗೆ ಏಟು ಮಾಡಿಕೊಂಡಿದ್ದರು.

ಪಂದ್ಯ ಆರಂಭ: ಸಂಜೆ 5.30

ನೇರಪ್ರಸಾರ: ಸೋನಿ ಸಿಕ್ಸ್

ಕ್ವಾರಂಟೈನ್ ಅವಧಿ ಕಡಿತಕ್ಕೆ ಬಿಸಿಸಿಐಗೆ ಮನವಿ

ಸರಣಿಯನ್ನು ಮುಗಿಸಿ ಐಪಿಎಲ್ ಟೂರ್ನಿಗಾಗಿ ಯುಎಇಗೆ ಆಗಮಿಸಿದ ವೇಳೆ ಕ್ವಾರಂಟೈನ್ ಅವಧಿಯನ್ನು 6ರಿಂದ 3 ದಿನಗಳಿಗೆ ಕಡಿತಗೊಳಿಸಬೇಕೆಂದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ. ಇದರಿಂದಾಗಿ ಎಲ್ಲ ಆಟಗಾರರು ತಮ್ಮ ತಂಡಗಳ ಮೊದಲ ಪಂದ್ಯದಲ್ಲಿ ಆಡಲು ಲಭ್ಯರಾಗಲಿದ್ದಾರೆ.

ಅಂತಿಮ ಏಕದಿನ ಪಂದ್ಯ ಮುಗಿದ ಬೆನ್ನಲ್ಲೇ ಉಭಯ ತಂಡಗಳಿಂದ ಸುಮಾರು 21 ಆಟಗಾರರು ಮ್ಯಾಂಚೆಸ್ಟರ್‌ನಿಂದ ದುಬೈಗೆ ವಿಶೇಷ ವಿಮಾನದಲ್ಲಿ ಆಗಮಿಸಲಿದ್ದಾರೆ. ಒಟ್ಟು 7 ತಂಡಗಳು ಕೂಡಿಕೊಂಡು ವ್ಯವಸ್ಥೆ ಮಾಡಿರುವ ಈ ವಿಮಾನಕ್ಕೆ ಒಟ್ಟು 1 ಕೋಟಿ ರೂ. ಬಾಡಿಗೆ ವೆಚ್ಚವಾಗಲಿದೆ.

ಆಟಗಾರರು ಸೆಪ್ಟೆಂಬರ್ 17ರಂದು ದುಬೈಗೆ ಕಾಲಿಟ್ಟು 6 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟರೆ ಸೆಪ್ಟೆಂಬರ್ 23ರ ನಂತರವೇ ಆಡಲು ಲಭ್ಯರಾಗಲಿದ್ದಾರೆ. ಆದರೆ ಟೂರ್ನಿ ಸೆಪ್ಟೆಂಬರ್ 19ರಂದೇ ಆರಂಭವಾಗಲಿದೆ. ಈಗಾಗಲೆ ಯುಎಇಯಲ್ಲಿ ಐಪಿಎಲ್ ಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಇಂಗ್ಲೆಂಡ್-ಆಸೀಸ್ ಆಟಗಾರರ ಈ ಬೇಡಿಕೆಗೆ ಇನ್ನೂ ಯಾವುದೇ ಉತ್ತರ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net