

ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಆಸ್ಟ್ರೆಲಿಯನ್ ಓಪನ್ನಲ್ಲಿ ದಾಖಲೆಯ 11ನೇ ಬಾರಿ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿದ್ದ ವಿಶ್ವ ನಂ. 1 ತಾರೆ ನೊವಾಕ್ ಜೋಕೊವಿಕ್ ಸೆಮಿಫೈನಲ್ ಹಂತದಲ್ಲಿ ಮುಗ್ಗರಿಸಿದ್ದಾರೆ. ಇಟಲಿಯ ಯುವ ಆಟಗಾರ ಜನ್ನಿಕ್ ಸಿನ್ನರ್, ಸೆರ್ಬಿಯಾದ ಅನುಭವಿ ಆಟಗಾರನಿಗೆ ಆಘಾತ ನೀಡಿದ್ದು, ಭಾನುವಾರದ ಫೈನಲ್ನಲ್ಲಿ ರಷ್ಯಾದ ಡೇನಿಯಲ್ ಮೆಡ್ವೆಡೇವ್ ವಿರುದ್ಧ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
ರಾಡ್ ಲೆವರ್ ಅರೇನಾದಲ್ಲಿ ಶುಕ್ರವಾರ ನಡೆದ ಕಾದಾಟದಲ್ಲಿ 36 ವರ್ಷದ ಜೋಕೊವಿಕ್ 1-6, 2-6, 7-6, 3-6 ಸೆಟ್ಗಳಿಂದ 3 ಗಂಟೆ 22 ನಿಮಿಷಗಳಲ್ಲಿ ಸಿನ್ನರ್ಗೆ ಶರಣಾದರು. 22 ವರ್ಷ ಸಿನ್ನರ್ 2008ರ ಬಳಿಕ ಮೆಲ್ಬೋರ್ನ್ ಪಾರ್ಕ್ನಲ್ಲಿ ಫೈನಲ್ಗೇರಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದರೆ, 10 ಬಾರಿಯ ಚಾಂಪಿಯನ್ ಹಾಗೂ 24 ಗ್ರಾಂಡ್ ಸ್ಲಾಂಗಳ ಒಡೆಯ ಜೋಕೊವಿಕ್ 2018ರ ಬಳಿಕ ಮೊದಲ ಬಾರಿ ಇಲ್ಲಿ ಸೋಲು ಕಂಡರು. ಮೆಲ್ಬೋರ್ನ್ನಲ್ಲಿ ಅವರ ಸತತ 33 ಗೆಲುವಿನ ಓಟವೂ ಕೊನೆಗೊಂಡಿದೆ ಮತ್ತು ಇಲ್ಲಿ ಸೆಮೀಸ್ ಹಂತದಲ್ಲಿ ಅವರಿಗೆ ಇದು ಮೊದಲ ಸೋಲಾಗಿದೆ. ಈ ಮುನ್ನ ಅವರು ಮೆಲ್ಬೋರ್ನ್ನಲ್ಲಿ ಕ್ವಾರ್ಟರ್ಫೈನಲ್ ಹಂತಕ್ಕೇರಿದ ಬಳಿಕ ಪ್ರತಿ ಬಾರಿಯೂ ಪ್ರಶಸ್ತಿ ಗೆದ್ದಿದ್ದರು.
3ನೇ ಶ್ರೇಯಾಂಕಿತ ಮೆಡ್ವೆಡೇವ್ ಮತ್ತೊಂದು ಸೆಮಿಫೈನಲ್ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಎದುರು 5-7, 3-6, 7-6, 7-6, 6-3ರಿಂದ 4 ಗಂಟೆ 18 ನಿಮಿಷಗಳ ಮ್ಯಾರಥಾನ್ ಹೋರಾಟದಲ್ಲಿ ಗೆಲುವು ದಾಖಲಿಸಿದರು.
ಇದು ನಾನಾಡಿದ ಅತ್ಯಂತ ಕೆಟ್ಟ ಗ್ರಾಂಡ್ ಸ್ಲಾಂ ಪಂದ್ಯವಾಗಿದೆ. ಸಿನ್ನರ್ ಫೈನಲ್ಗೇರಲು ನಿಜಕ್ಕೂ ಅರ್ಹರು. ನನ್ನನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದರು. ಆದರೆ ಇದು ನನ್ನ ವೃತ್ತೀಜಿವನ ಮುಕ್ತಾಯದ ಆರಂಭವೆಂಬುದನ್ನು ಒಪ್ಪಲಾರೆ ಎಂದು ನೊವಾಕ್ ಜೋಕೊವಿಕ್ ಹೇಳಿದರು.