ಬೆಂಗಳೂರಿನಲ್ಲಿ ನಡೆದ ಏಷ್ಯನ್​ ನೆಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ​ ಸಿಂಗಾಪುರಕ್ಕೆ ಕಿರೀಟ

web netball
Published on

ಬೆಂಗಳೂರು: ಸಿಂಗಾಪುರ ತಂಡ ಮಹಿಳೆಯರ 13ನೇ ಏಷ್ಯನ್​ ನೆಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಸಿಂಗಾಪುರ ತಂಡ 67-64 ಅಂತರದಿಂದ ಶ್ರೀಲಂಕಾ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನಾಲ್ಕನೇ ಕ್ವಾರ್ಟರ್​ ಅಂತ್ಯಕ್ಕೆ ಉಭಯ ತಂಡಗಳು 52-52 ಅಂಕಗಳಿಂದ ಸಮಬಲ ಸಾಧಿಸಿದ್ದವು. ಬಳಿಕ ನಡೆದ ಹೆಚ್ಚುವರಿ ಸಮಯದ ಆಟದಲ್ಲಿ ಸಿಂಗಾಪುರ ತಂಡ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡ ಹಾಂಕಾಂಗ್​ ವಿರುದ್ಧ 67-48 ಅಂಕಗಳಿಂದ ಗೆಲುವು ದಾಖಲಿಸಿತು. ಆತಿಥೇಯ ಭಾರತ ತಂಡ 9ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಟೂರ್ನಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದವು.

ಸಮಾರೋಪ ಸಮಾರಂಭದಲ್ಲಿ ಸಚಿವ ರಾಮಲಿಂಗ ರೆಡ್ಡಿ, ಕರ್ನಾಟಕ ಒಲಿಂಪಿಕ್ಸ್​ ಸಂಸ್ಥೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜು ಬಹುಮಾನ ವಿತರಿಸಿದರು. ಭಾರತೀಯ ನೆಟ್​ಬಾಲ್​ ಒಕ್ಕೂಟದ ಅಧ್ಯೆ ಸುಮನ್​ ಕೌಶಿಕ್​, ಏಷ್ಯಾ ನೆಟ್​ಬಾಲ್​ ಅಧ್ಯೆ ವಿಕ್ಟರಿ ಲಕ್ಷ್ಮಿ, ಏಷ್ಯಾ ನೆಟ್​ಬಾಲ್​ ಕಾರ್ಯದರ್ಶಿ ವಿವಿನ್​ ಡಿ ಸೆಲ್ವಾ, ಏಷ್ಯಾ ನೆಟ್​ಬಾಲ್​ ಸಿಇಒ ಸೈರಸ್​, ರಾಷ್ಟ್ರೀಯ ನೆಟ್​ಬಾಲ್​ ಅಭಿವೃದ್ಧಿ ಸಮಿತಿ ಚೇರ್ಮನ್​ ಹರಿಓಂ ಕೌಶಿಕ್​, ಭಾರತೀಯ ನೆಟ್​ಬಾಲ್​ ಒಕ್ಕೂಟದ ಉಪಾಧ್ಯಕ್ಷರಾದ ಅಮಿತ್​ ಅರೋರ, ಅಶೋಕ್​ ಕುಮಾರ್​, ಗಿರೀಶ್​ ಸಿ ಮತ್ತು ಮೀನಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net