ಇಂದಿನಿಂದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್; ಭಾರತದ ಪ್ರಶಸ್ತಿ ಬರ ನೀಗಿಸುವರೇ ಸಿಂಧು?

sindhu web
Published on

ಬರ್ಮಿಂಗ್‌ಹ್ಯಾಂ: ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಬುಧವಾರ ಆರಂಭವಾಗಲಿದ್ದು, ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕಳೆದ ಸ್ವಿಸ್ ಓಪನ್‌ನಲ್ಲಿ ಫೈನಲ್‌ಗೇರುವ ಮೂಲಕ ಲಯಕ್ಕೆ ಮರಳಿದ್ದ ಪಿವಿ ಸಿಂಧು, ಪ್ರಶಸ್ತಿ ಹೋರಾಟದಲ್ಲಿ ಸ್ಪೇನ್ ತಾರೆ ಕ್ಯಾರೊಲಿನ್ ಮರಿನ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು. ಇದೀಗ ಮರಿನ್ ಗಾಯದಿಂದಾಗಿ ಈ ಟೂರ್ನಿಯಿಂದ ಹಿಂದೆ ಸರಿದಿರುವುದು ಸಿಂಧು ಹಾದಿಯನ್ನು ಅಲ್ಪಮಟ್ಟಿಗೆ ಸುಲಭಗೊಳಿಸಿದೆ. ಇದಲ್ಲದೆ ಚೀನಾ, ಕೊರಿಯಾ ಮತ್ತು ಚೀನಾ ತೈಪೆಯ ಕೆಲ ತಾರೆಯರೂ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ಸೂಪರ್ 1,000 ಟೂರ್ನಿ ಟೋಕಿಯೊ ಒಲಿಂಪಿಕ್ಸ್ ಅರ್ಹತೆಗೆ ಪರಿಗಣಿಸಲ್ಪಡದಿರುವುದು ಇದಕ್ಕೆ ಕಾರಣವಾಗಿದೆ.

ರಿಯೋ ಒಲಿಂಪಿಕ್ಸ್ ರಜತ ವಿಜೇತೆ ಪಿವಿ ಸಿಂಧು ಹಾಲಿ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದ ಹಾಟ್ ಫೇವರಿಟ್ ಆಗಿ ಪರಿಗಣಿಸಲ್ಪಟ್ಟಿದ್ದಾರೆ. ಮಾಜಿ ವಿಶ್ವ ನಂ. 1 ಸೈನಾ ನೆಹ್ವಾಲ್ ಕಳೆದ 2 ವರ್ಷಗಳಲ್ಲಿ 2 ಟೂರ್ನಿಗಳಲ್ಲಿ ಕ್ವಾರ್ಟರ್​ಫೈನಲ್ ಪ್ರವೇಶಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಅವರ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆಗಳಿಲ್ಲ.

ಭಾರತದ ಇತರ ಷಟ್ಲರ್‌ಗಳ ಪೈಕಿ ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮೇಲೆ ನಿರೀಕ್ಷೆಗಳಿವೆ. ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗಿರುವ ಸಾತ್ವಿಕ್-ಚಿರಾಗ್ ಜೋಡಿ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲೂ ಇದೆ.

5ನೇ ಶ್ರೇಯಾಂಕದೊಂದಿಗೆ ಕಣಕ್ಕಿಳಿಯಲಿರುವ ಪಿವಿ ಸಿಂಧು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಸೋನಿಯ ಚೇಹ್ ವಿರುದ್ಧ ಸೆಣಸಲಿದ್ದಾರೆ. ಕ್ವಾರ್ಟರ್​ಫೈನಲ್‌ನಲ್ಲಿ ಅವರಿಗೆ ಜಪಾನ್‌ನ ಅಕಾನೆ ಯಮಗುಚಿ ಸವಾಲು ಎದುರಾಗುವ ನಿರೀಕ್ಷೆ ಇದೆ. ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ಮೊದಲ ಸುತ್ತಿನಲ್ಲಿ 7ನೇ ಶ್ರೇಯಾಂಕಿತೆ ಡೆನ್ಮಾರ್ಕ್‌ನ ಮಿಯ ಬ್ಲಿಚ್​ಫೆಲ್ಡ್ ಅವರ ಕಠಿಣ ಸವಾಲು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್ ಇಂಡೋನೇಷ್ಯಾದ ಟಾಮಿ ಸುಗಿಯಾರ್ತೋ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್ ಕಂಚು ವಿಜೇತ ಬಿ. ಸಾಯಿ ಪ್ರಣೀತ್ ್ರಾನ್ಸ್‌ನ ಟೊಮ ಜೂನಿಯರ್ ಪೊಪೊವ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ವಿಜೇತ ಪಾರುಪಳ್ಳಿ ಕಶ್ಯಪ್ ವಿಶ್ವ ನಂ. 1 ಜಪಾನ್ ತಾರೆ ಕೆಂಟೊ ಮೊಮೊಟ ಎದುರು ಹೋರಾಡಲಿದ್ದಾರೆ. ಎಚ್‌ಎಸ್ ಪ್ರಣಯ್ ಮಲೇಷ್ಯಾದ ಡರೇನ್ ಲೀವ್ ವಿರುದ್ಧ ಆಡಲಿದ್ದಾರೆ. ಸಮೀರ್ ವರ್ಮ ಮತ್ತು ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿರುವ ಮತ್ತಿಬ್ಬರು ಭಾರತೀಯರು.

*ಪಂದ್ಯಗಳು ಆರಂಭ: ಮಧ್ಯಾಹ್ನ 2.30

*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್3

20 ವರ್ಷಗಳಿಂದ ಭಾರತಕ್ಕೆ ಪ್ರಶಸ್ತಿ ಬರ!

ಪ್ರಮುಖ ಗೈರಿನಲ್ಲಿ ಟೂರ್ನಿ ಸ್ವಲ್ಪಮಟ್ಟಿಗೆ ಗುಣಮಟ್ಟವನ್ನು ಕಳೆದುಕೊಂಡಿದ್ದರೂ, 19 ಸದಸ್ಯರ ದೊಡ್ಡ ತಂಡದೊಂದಿಗೆ ಕಣಕ್ಕಿಳಿಯುತ್ತಿರುವ ಭಾರತಕ್ಕೆ ಕಳೆದ ಕೆಲ ವರ್ಷಗಳಿಂದ ಈ ಟೂರ್ನಿಯಲ್ಲಿ ಮರೀಚಿಕೆಯಾಗಿರುವ ಪ್ರಶಸ್ತಿಯನ್ನು ಒಲಿಸಿಕೊಳ್ಳಲು ಉತ್ತಮ ಅವಕಾಶವಿದೆ. ದಿಗ್ಗಜರಾದ ಪ್ರಕಾಶ್ ಪಡುಕೋಣೆ (1980) ಮತ್ತು ಪುಲ್ಲೇಲಾ ಗೋಪಿಚಂದ್ (2001) ಬಿಟ್ಟರೆ ಬೇರೆ ಯಾವ ಭಾರತೀಯರೂ ಈ ಟೂರ್ನಿಯಲ್ಲಿ ಇದುವರೆಗೆ ಪ್ರಶಸ್ತಿ ಜಯಿಸಿಲ್ಲ. 2015ರಲ್ಲಿ ಸೈನಾ ನೆಹ್ವಾಲ್ ಫೈನಲ್‌ಗೇರಿ ರನ್ನರ್‌ಅಪ್ ಆಗಿದ್ದೇ ಅನಂತರದ ಅತ್ಯುತ್ತಮ ಸಾಧನೆಯಾಗಿದೆ. ಪಿವಿ ಸಿಂಧ 2018ರಲ್ಲಿ ಸೆಮಿಫೈನಲ್‌ಗೇರಿರುವುದು ಟೂರ್ನಿಯಲ್ಲಿ ಅವರ ಇದುವರೆಗಿನ ಅತ್ಯುತ್ತಮ ನಿರ್ವಹಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net