

ಲಂಡನ್: ರಷ್ಯಾದ ಯುವ ಆಟಗಾರ ಡೇನಿಲ್ ಮೆಡ್ವೆಡೇವ್ ವರ್ಷಾಂತ್ಯದ ಪ್ರತಿಷ್ಠಿತ ಟೆನಿಸ್ ಟೂರ್ನಿ ಎಟಿಪಿ ಫೈನಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿ ಗೆಲುವಿನ ಸಾಧನೆ ಮಾಡಿದ್ದಾರೆ.
ವಿಶ್ವ ನಂ. 4 ಆಟಗಾರ ಮೆಡ್ವೆಡೇವ್ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 3 ಡೊಮಿನಿಕ್ ಥೀಮ್ ವಿರುದ್ಧ 4-6, 7-6, 6-4 ಸೆಟ್‌ಗಳಿಂದ ಗೆಲುವು ದಾಖಲಿಸಿದರು. ಟೂರ್ನಿಯ ಸೆಮೀಸ್‌ನಲ್ಲಿ ವಿಶ್ವ ನಂ. 2 ರಾಫೆಲ್ ನಡಾಲ್ ಮತ್ತು ಗ್ರೂಪ್ ಹಂತದಲ್ಲಿ ವಿಶ್ವ ನಂ. 1 ನೊವಾಕ್ ಜೋಕೊವಿಕ್‌ಗೆ ಸೋಲುಣಿಸಿದ್ದ 24 ವರ್ಷದ ಮೆಡ್ವೆಡೇವ್ ಅರ್ಹವಾಗಿಯೇ ಪ್ರಶಸ್ತಿ ಒಲಿಸಿಕೊಂಡರು.
ಎಟಿಪಿ ಫೈನಲ್ಸ್ ಇತಿಹಾಸದಲ್ಲಿ ವಿಶ್ವ ರ‌್ಯಾಂಕಿಂಗ್‌ನ ಅಗ್ರ ಮೂವರು ಆಟಗಾರರಿಗೆ ಸೋಲುಣಿಸಿದ ಮೊದಲ ಮತ್ತು 1990ರ ಬಳಿಕ ಯಾವುದೇ ಟೂರ್ನಿಯಲ್ಲಿ ಈ ಸಾಧನೆ ಮಾಡಿದ 4ನೇ ಆಟಗಾರರೆನಿಸಿದರು. ಕರೊನಾ ಹಾವಳಿಯಿಂದಾಗಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದ ಈ ಹಾರ್ಡ್ ಕೋರ್ಟ್ ಟೂರ್ನಿಯಲ್ಲಿ ಮೆಡ್ವೆಡೇವ್ ಆಡಿದ ಎಲ್ಲ 5 ಪಂದ್ಯಗಳಲ್ಲೂ ಗೆದ್ದ ಅಜೇಯ ಸಾಧನೆ ಮಾಡಿದರು.
ನವೆಂಬರ್ ತಿಂಗಳಲ್ಲಿ ಆಡಿದ ಎಲ್ಲ 10 ಪಂದ್ಯಗಳಲ್ಲೂ ಜಯಿಸಿರುವ ಮೆಡ್ವೆಡೇವ್, ಈ ಪೈಕಿ 7 ಗೆಲುವುಗಳನ್ನು ವಿಶ್ವ ರ‌್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗಿರುವ ಆಟಗಾರರ ವಿರುದ್ಧವೇ ದಾಖಲಿಸಿದ್ದಾರೆ. ಯುಎಸ್ ಓಪನ್ ಚಾಂಪಿಯನ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಟೂರ್ನಿಯಲ್ಲಿ ಸತತ 2ನೇ ವರ್ಷ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು. ಕಳೆದ ವರ್ಷದ ಫೈನಲ್‌ನಲ್ಲಿ ಅವರು ಗ್ರೀಕ್‌ನ ಸ್ಟಿಫಾನೋಸ್ ಸಿಸಿಪಾಸ್ ವಿರುದ್ಧ ಸೋಲು ಕಂಡಿದ್ದರು.