ಜಹೀರ್ ಖಾನ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ, ಫ್ಯಾನ್ಸ್ ಶುಭಾಶಯ

zaheer web new
Published on

ನವದೆಹಲಿ: ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗಾರಿಕಾ ಘಾಟ್ಕೆ ದಂಪತಿಗೆ ಸೋಮವಾರ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆ ಹರಿದುಬಂದಿದೆ.

2017ರ ನವೆಂಬರ್ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಜಹೀರ್ ಮತ್ತು ಸಾಗಾರಿಕಾ, ಶೀಘ್ರದಲ್ಲೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅರಬ್ ರಾಷ್ಟ್ರದಲ್ಲಿ ನಡೆದ ಐಪಿಎಲ್ ಟೂರ್ನಿಗೆ ಪತಿ ಜಹೀರ್ ಖಾನ್ ಜತೆಗೆ ತೆರಳಿದ್ದ ಸಾಗಾರಿಕಾ ಗರ್ಭಿಣಿಯಾಗಿರುವುದು ಚಿತ್ರಗಳಲ್ಲಿ ಕಂಡುಬಂದಿತ್ತು.

2017ರಲ್ಲಿ ನಡೆದ ಯುವರಾಜ್ ಸಿಂಗ್ ವಿವಾಹದ ವೇಳೆ ಜಹೀರ್-ಸಾಗಾರಿಕಾ ನಡುವಿನ ಡೇಟಿಂಗ್ ಬಹಿರಂಗಗೊಂಡಿತ್ತು. ಈ ಮೂಲಕ ಕ್ರಿಕೆಟ್-ಬಾಲಿವುಡ್ ನಡುವಿನ ಮತ್ತೊಂದು ಪ್ರೇಮ ಪ್ರಕರಣ ಬೆಳಕಿಗೆ ಬಂದಿತ್ತು.

ಜಹೀರ್ ಖಾನ್ ದಂಪತಿಗೆ ಇನ್‌ಸ್ಟಾಗ್ರಾಂನಲ್ಲಿ ಶುಭ ಹಾರೈಸಿರುವ ಮುಂಬೈ ಇಂಡಿಯನ್ಸ್ ತಂಡ, ‘ಮೂರು ವರ್ಷಗಳು ಮುಗಿದವು. ಇನ್ನೂ ಇಡೀ ಜೀವನ ಬಾಕಿ ಇದೆ’ ಎಂದು ಬರೆದುಕೊಂಡಿದೆ.

ಜಹೀರ್ ಖಾನ್ ಭಾರತ ತಂಡದ ಪರ 2000ದಿಂದ 2014ರವರೆಗೆ 92 ಟೆಸ್ಟ್, 200 ಏಕದಿನ ಮತ್ತು 17 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 311, 282 ಮತ್ತು 17 ವಿಕೆಟ್ ಕಬಳಿಸಿದ್ದಾರೆ. ಶಾರುಖ್ ಖಾನ್ ಅಭಿನಯದ ಜನಪ್ರಿಯ ‘ಚಕ್‌ದೇ ಇಂಡಿಯಾ’ ಸಹಿತ ಹಲವು ಸಿನಿಮಾಗಳಲ್ಲಿ ಸಾಗಾರಿಕಾ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net